ಮೈಸೂರು: ನೈಋತ್ಯ ರೈಲ್ವೆಯ ಪ್ರಮುಖ ನಿಲ್ದಾಣಗಳ ವಿಭಾಗದಲ್ಲಿ ಮೈಸೂರು ರೈಲ್ವೆ ನಿಲ್ದಾಣವನ್ನು 2019-20ನೇ ವರ್ಷದ ಅತ್ಯುತ್ತಮ ನಿರ್ವಹಣೆಯ ನಿಲ್ದಾಣ ಎಂದು ಆಯ್ಕೆ ಮಾಡಲಾಗಿದೆ.
2019-20ರ ವರ್ಷದ ನೈಋತ್ಯ ರೈಲ್ವೆಯಲ್ಲಿ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಪ್ರಮುಖ ನಿಲ್ದಾಣ ಮೈಸೂರು ರೈಲ್ವೆ ನಿಲ್ದಾಣ
ನೈಋತ್ಯ ರೈಲ್ವೆಯು 65ನೇ ರೈಲ್ವೆ ವಾರ ಸಂಭ್ರಮಾಚರಣೆಯನ್ನು ಮಂಗಳವಾರ ಹುಬ್ಬಳ್ಳಿಯಲ್ಲಿ ಆಚರಿಸಿತು.
ಇದು ಸತತವಾಗಿ 4ನೇ ಬಾರಿ ಮೈಸೂರು ನಿಲ್ದಾಣವು ಈ ಪ್ರಶಸ್ತಿಯನ್ನು ತನ್ನಮುಡಿಗೇರಿಸಿಕೊಂಡಿದೆ.
2019-20ನೇ ಸಾಲಿನಲ್ಲಿ ಕೈಗೊಂಡ ಸಮಗ್ರ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ಮೈಸೂರು ರೈಲ್ವೆ ನಿಲ್ದಾಣವು ಕಟ್ಟಡದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು ಸಾಕಷ್ಟು ಕಾಳಜಿಯೊಂದಿಗೆ ಅನೇಕ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಹೆಚ್ಚಿಸಿದೆ.
ಮೈಸೂರು ವಿಭಾಗದ ಸಂಕೇತ ಮತ್ತು ದೂರಸಂಪರ್ಕ ಇಲಾಖೆ 2019-20ನೇ ವರ್ಷದ ವಲಯ ದಕ್ಷತೆಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಮೈಸೂರು ವಿಭಾಗದ ಭದ್ರತಾ ವಿಭಾಗವು 2019-20ನೇ ಸಾಲಿನ ದಕ್ಷತೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.
ಮೈಸೂರಿನಲ್ಲಿ ಪ್ರಾಥಮಿಕ ರಿಪೇರಿಕಾರ್ಯ ನಿರ್ವಹಿಸಲ್ಪಡುವ ಮೈಸೂರು ಮತ್ತು ನಿಜಾಮುದ್ದೀನ್ (ನವದೆಹಲಿ) ನಡುವೆ ಚಲಿಸುವ ಪ್ರತಿಷ್ಠಿತ ಸ್ವರ್ಣಜಯಂತಿ ವಾರದ ಸೂಪರ್ಫಾಸ್ಟ್ ರೈಲನ್ನು 2019-20 ರ ವರ್ಷಕ್ಕೆ ನೈಋತ್ಯ ರೈಲ್ವೆಯಲ್ಲಿ ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್ ಎಂದು ಘೋಷಿಸಲಾಗಿರುವುದು ಮೈಸೂರು ವಿಭಾಗಕ್ಕೆ ಸಿಕ್ಕ ಮತ್ತೊಂದು ಗರಿಯಾಗಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ಅವರು ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವರ 2019-20ರ ಅವಧಿಯಲ್ಲಿನ ಅಸಾಧಾರಣ ಕಾರ್ಯಗಳಿಗಾಗಿ ಅಭಿನಂದಿಸಿದ್ದಾರೆ.
ಗರ್ಗ್ರವರು ವಿಭಾಗದ ಸಂಪೂರ್ಣ ಕಾರ್ಯಪಡೆಗೆ, ತನ್ನ ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸುವಂತೆ ಮಾಡಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವಂತೆ ಕರೆ ನೀಡಿದರು.