ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಬುಧವಾರ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್ ನಿಂದ ಕೃಷ್ಣಮೂರ್ತಿ ನಾಮಪತ್ತ ಸಲ್ಲಿಸಿದ್ದಾರೆ.
ಬೆಂಬಲಿಗರು ಮತ್ತು ಸಚಿವರೊಂದಿಗೆ ಆಗಮಿಸಿದ ಮುನಿರತ್ನ ಅವರು ನಾಮಪತ್ರ ಸಲ್ಲಿಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನನ್ನ ಮೇಲಿರುವ ಕ್ಷೇತ್ರದ ಜನತೆಯ ಋಣವನ್ನ ತೀರಿಸುತ್ತೇನೆ ಎಂದರು.
ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಸೇರಿದಂತೆ ಹಲವರು ಮುನಿರತ್ನ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸಿ, ಇಂದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ. ಇಂತಹ ಅವಕಾಶ ಸಿಕ್ಕಿದ್ದಕ್ಕೆ ನಾನು ಯಾವಾಗಲೂ ಚಿರಋಣಿ ಎಂದು ಹೇಳಿದರು.
ಕುಸುಮಾರವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಿದ್ದರು.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ನಾಮಪತ್ರ ಸಲ್ಲಿಸಿ ನಂತರ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿಗೆ ಜನರು ಮತ ಕೊಡಬೇಕು. ಇಲ್ಲಿ ನಾನು ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಅಭ್ಯರ್ಥಿ ಎಂದು ಹೇಳಿದರು.
ಕೃಷ್ಣಮೂರ್ತಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದ್ದರು.