ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆಗೆ ಸರ್ಕಾರದ ನೀಲಿನಕ್ಷೆ -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆಗೆ ಸರ್ಕಾರದ ನೀಲಿನಕ್ಷೆ ಸಿದ್ಧಪಡಿಸಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಹೃದ್ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯ ಜಯದೇವ ಹೃದ್ರೋಗ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳ ಮೂಲ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಗುಣಮಟ್ಟದ ಚಿಕಿತ್ಸೆಗೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಹೃದ್ರೋಗಗಳಿಂದಾಗುವ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಶೇ. 25ರಷ್ಟು ಸಾವು ಹೃದಯ ಸಂಬಂಧಿ ಕಾಯಿಲೆಗಳಿಂದ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಭಾಗಗಳ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 700 ಹಾಸಿಗೆಗಳಿದ್ದು, ಅದನ್ನು 1 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಷನ್‍ನ ಸುಧಾಮೂರ್ತಿ ಅವರು 50 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 350 ಹಾಸಿಗೆಗಳ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿಕೊಡುತ್ತಿದ್ದಾರೆ ಎಂದು ವಿವರಿಸಿದರು.
ಮೈಸೂರು ಜಯದೇವ ಆಸ್ಪತ್ರೆಯು ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ಹೃದ್ರೋಗಿಗಳಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಸದ್ಯ ಆಸ್ಪತ್ರೆ ಮೇಲೆ ಹೆಚ್ಚಿನ ಒತ್ತಡವಿರುವುದರಿಂದ 350 ಹಾಸಿಗೆಗಳ ಸಾಮರ್ಥ್ಯ ವನ್ನು 400 ಹಾಸಿಗೆಗಳಿಗೆ ಹೆಚ್ಚಿಸಲಾಗುತ್ತಿದೆ. ಹೆಚ್ಚುವರಿಯಾಗಿ ಮತ್ತೊಂದು ಶಸ್ತ್ರಚಿಕಿತ್ಸಾ ಘಟಕ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.