ಮೈಸೂರಲ್ಲಿ ಸರಳ ದಸರಾ ಆಚರಣೆ -ಸಚಿವ ಎಸ್ ಟಿಎಸ್

ಮೈಸೂರು, ಅ. 15- ಈ ಬಾರಿ ಮೈಸೂರಲ್ಲಿ ಸರಳ ದಸರಾವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಗುರುವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರಳ ದಸರಾವನ್ನು ಮಾತ್ರ ಆಚರಿಸಲಾಗುವುದು. ಶುಕ್ರವಾರ ಮೈಸೂರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಜಿಲ್ಲಾಡಾಳಿತದಿಂದ ಈಗಾಗಲೇ ಎಲ್ಲ ಸಿದ್ಧತೆಗಳು ಆಗಿವೆ. ಶನಿವಾರ ಮುಖ್ಯಮಂತ್ರಿಗಳು ನಾಡಹಬ್ಬ ದಸರಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬರುವ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದೆ ಎಂದವರು ತಿಳಿಸಿದರು.
ಕೇಂದ್ರ ಸರ್ಕಾರ ಹಾಗೂ ತಜ್ಞರ ತಂಡ ನೀಡಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ. ಸಾರ್ವಜನಿಕ ನಿರ್ಬಂಧ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ರಾಜರಾಜೇಶ್ವರಿ ನಗರ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿ ಮುನಿರತ್ನ ಅವರು ಈ ಚುನಾವಣೆಯಲ್ಲಿ 30ರಿಂದ 40 ಸಾವಿರ ಲೀಡ್ ನೊಂದಿಗೆ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ನನಗೆ ದಸರಾ ಇರುವುದರಿಂದ ಎಲ್ಲ ಸಮಯ ಅಲ್ಲಿ ಇರಲು ಆಗುತ್ತಿಲ್ಲ. ರಾಜರಾಜೇಶ್ವರಿ ನಗರ ಸಹ ನನ್ನ ಕ್ಷೇತ್ರದ ಪಕ್ಕವೇ ಇರುವುದರಿಂದ ಗೆಲುವಿಗೆ ಇನ್ನಷ್ಟು ಹೆಚ್ಚಿಗೆ ಕೆಲಸ ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದರು.
ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಸಿಗಲು ನಾನು ಸಹ ಬಹಳಷ್ಟು ಪ್ರಯತ್ನಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಗೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.