ಸ್ಪೂರ್ತಿಯ ಸೆಲೆ ಅಬ್ದುಲ್ ಕಲಾಂ

ಡಾ. ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಇಂದು (ಅ. 15) ನಮ್ಮ ದೇಶದ ಮಹಾನ್ ವಿಜ್ಞಾನಿ, ‘ಮಿಸೈಲ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಅವರ 89 ವರ್ಷದ ಜನ್ಮ ದಿನಾಚರಣೆ.
ಕಲಾಂ ಅವರು ಸಾಕಷ್ಟು ಬಡತನದಿಂದ, ಸ್ವಂತ ಪರಿಶ್ರಮದಿಂದ ಸಾಧನೆಗೈದವರು. ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರು.
ಇವರಿಗೆ ಬಡತನದ ನೋವು ಗೊತ್ತು, ಸಿರಿತನದ ಐಭೋಗವೂ ಗೊತ್ತಿದೆ. ತಾನು ಎಷ್ಟೇ ಉನ್ನತ ಹುದ್ದೆ ಏರಿದರು ಇವರಿಗೆ ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿ ಮಾತ್ರ ಎಂದಿಗೂ ಕುಂದಲಿಲ್ಲ.
ಏಕತೆಯ ವಿರಳತೆ ಎಂದೇ ಕರೆಯಬಹುದಾಗಿದ್ದ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ 2002ರಲ್ಲಿ ಭಾರತದ 11ನೇ ಅಧ್ಯಕ್ಷರಾಗಿ ಕಲಾಂ ಅವರನ್ನು ಚುನಾಯಿಸಿದರು.
ಅಧ್ಯಕ್ಷರಾಗಿ ಭಾರತ ಮತ್ತು ಹೊರದೇಶಗಳಲ್ಲಿ ಕಲಾಂರ ಘನತೆ ಮತ್ತು ಆಶಾವಾದ ಹರಡಿತು. ಯುಎನ್ ಮತ್ತು ಐರೋಪ್ಯ ಪಾರ್ಲಿಮೆಂಟ್‍ಗಳಲ್ಲಿ ಇವರ ಸ್ಫೂರ್ತಿದಾಯಕ ಭಾಷಣಗಳು ಎಲ್ಲರ ಮನಗೆದ್ದಿತು. ಅವರು ತಮ್ಮ ಸರಳತೆಯಿಂದಲೇ ಎಲ್ಲರ ಪ್ರೀತಿಪಾತ್ರರಾದರು.
ಅಧ್ಯಕ್ಷರಾಗಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಕಲಾಂ ಅವರು ಅತಿಥಿ ಪ್ರಾಧ್ಯಾಪಕರಾದರು ಮತ್ತು ಯುವ ಜನಾಂಗಕ್ಕಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು
ಕಲಾಂ ಅವರು ಬರೆದ ‘ವಿಂಗ್ಸ್ ಆಫ್ ಫೈರ್’ ಮತ್ತು ‘ಇಂಡಿಯಾ 2020′ ಅಸಂಖ್ಯಾತ ಭಾರತೀಯರಿಗಾಗಿ ಸ್ಫೂರ್ತಿದಾಯಕ ಕೃತಿಗಳಾಗಿವೆ.
ಕಲಾಂ ಎಂದಿಗೂ ತಮ್ಮ ಜೀವನದ ಅನುಭವಗಳನ್ನೇ ವಿದ್ಯಾರ್ಥಿಗಳಿಗೆ ಬುದ್ಧ ಪಾಠವಾಗಿ ಹೇಳುತ್ತಿದ್ದರು.
ಇವರ ಸಾಕಷ್ಟು ಹೇಳಿಕೆಗಳಿಂದ ಪ್ರೇರಣೆ ಪಡೆದ ಅನೇಕರು ಇಂದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಕಲಾಂ ಹೇಳಿಕೆಗಳು ಇಂದಿಗೂ ಸಾಕಷ್ಟು ಜನರಿಗೆ ಸ್ಪೂರ್ತಿದಾಯಕ. ಕಲಾಂರ ಜೀವನ ಅನುಭವದ ಸ್ಪೂರ್ತಿಯ ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.
ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ.
ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.
ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆಯು ನನ್ನನ್ನು ಏನು ಮಾಡಲಾಗದು.
ಒಂದು ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ, ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ.
ಅತಿಯಾದ ಸಂತೋಷವಾದಾಗ ಅಥವಾ ಅತೀವ ದುಃಖವಾದಾಗ ಮಾತ್ರ ಕವನ ಕುಡಿಯೊಡೆಯುತ್ತದೆ.
ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.
ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಎಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ.
ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ.
ಶ್ರೇಷ್ಠ ವ್ಯಕ್ತಿಗಳಿಗೆ ಧರ್ಮವು ಸ್ನೇಹಿತರನ್ನು ಸಂಪಾದಿಸುವ ಮಾರ್ಗವಾಗಿದೆ. ಆದರೆ ಚಿಲ್ಲರೆ ವ್ಯಕ್ತಿಗಳಿಗೆ ಧರ್ಮವು ಕಲಹವನ್ನು ಸೃಷ್ಟಿಸುವ ಅಸ್ತ್ರವಾಗಿದೆ.
ಕೇವಲ ಯಶಸ್ಸಿನ ಕತೆಗಳನ್ನೇ ಹೆಚ್ಚು ಓದಬೇಡಿ. ಏಕೆಂದರೆ ಯಶಸ್ಸಿನ ಕತೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕತೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು ಕುಡಿಯೊಡೆಯುತ್ತದೆ.
ನೀವು ನಿದ್ದೆ ಮಾಡುವಾಗ ಕಾಣುವ ಕನಸು ನಿಜವಾದ ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.
ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ. ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.
ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು ಮನಸಿಗೆ ತಾಕದಿರಲಿ.
ದೊಡ್ಡ ಗುರಿ, ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ಧೃಢ ನಿಷ್ಠೆ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು.
ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.
ನಿಮ್ಮ ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ, ನೀವು ಎರಡನೇಯದರಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚು ತುಟಿಗಳು ಕಾಯುತ್ತಿರುತ್ತದೆ.
ಒಂದು ದೇಶ ಭ್ರಷ್ಟಾಚಾರ ಮುಕ್ತವಾಗಬೇಕೆಂದರೆ ಹಾಗೂ ಅತ್ಯುತ್ತಮ ಮನಸ್ಸು, ಬುದ್ದಿ ಇರುವ ಜನರ ದೇಶವಾಗಬೇಕೆಂದರೆ, ಸಮಾಜದ ಮೂರು ಪ್ರಮುಖ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬುದು ನನ್ನ ದೃಢ ನಂಬಿಕೆ. ಅವರೆಂದರೆ, ತಂದೆ, ತಾಯಿ ಹಾಗೂ ಶಿಕ್ಷಕರು.
ನನ್ನ ಜೀವನ ನಾನು ವಿದ್ಯಾರ್ಥಿಗಳ ಜೊತೆಗೆ ಇರುವಾಗಲೇ ಕೊನೆಯಾಗಬೇಕು. ಎಂದು ಹೇಳಿದ್ದ ಕಲಾಂವರು ಜುಲೈ 27ರಂದು 2015ರಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿಗಳ ಎದುರು ಉಪನ್ಯಾಸ ನೀಡುವ ಸಮಯದಲ್ಲೇ ಕಲಾಂ ಅವರು ಹೃದಯ ಸ್ತಂಭನದಿಂದ ಕುಸಿದು ನಿಧನರಾದರು.
ದೇಶ ಕಂಡ ಶ್ರೇಷ್ಠ ವಿಜ್ಞಾನಿ ಕಲಾಂ ಅವರ ಜೀವನವೇ ಒಂದು ಸ್ಪೂರ್ತಿಯ ಸೆಲೆಯಾಗಿದೆ.