ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗಿರುವರಿಗೆ ನೇಮಕಾತಿ ಪತ್ರ ನೀಡಲಾಗುವುದು; ಮುಷ್ಕರ ಕೈಬಿಡಿ -ಸಚಿವ ಸುರೇಶ್ ಕುಮಾರ್

ಬೆಂಗಳೂರು: ಶಾಲಾ ಕಾಲೇಜು ಆರಂಭದ ನಂತರ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುವುದೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರು ಈ ಬಗ್ಗೆ ಗುರುವಾರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನೇಮಕಾತಿ ಆದೇಶಕ್ಕಾಗಿ ಆಗ್ರಹಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪ್ರತಿನಿಧಿಗಳ ಜೊತೆ ಗುರುವಾರ ಬೆಳಿಗ್ಗೆ ನಾನು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದಲೇ ಮಾತನಾಡಿದೆ.
ನಂತರ ಮುಷ್ಕರ ನಿರತರರನ್ನು ನನ್ನ ಕೋರಿಕೆ ಮೇರೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಇಂದು ಭೇಟಿ ಮಾಡಿದರು.
ಧರಣಿನಿರತ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ್, ನೆನೆಗುದಿಗೆ ಬಿದ್ದಿದ್ದ ಉಪನ್ಯಾಸಕರ ನೇಮಕ ಪ್ರಕ್ರಿಯೆ ಕುರಿತಂತೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ಕೈಗೊಂಡ ಕ್ರಮಗಳನ್ನು ವಿವರಿಸಿ, ಕೊರೊನಾ ಹಿನ್ನೆಯಲ್ಲಿ ಅಸ್ತಿತ್ವದಲ್ಲಿರುವ ಆರ್ಥಿಕ ಮಿತವ್ಯಯ ಆದೇಶದ ಮಧ್ಯೆಯೂ ಆರ್ಥಿಕ ಇಲಾಖೆಯ ವಿಶೇಷ ಅನುಮತಿ ಪಡೆದು ಸರ್ಕಾರ, ಕೌನ್ಸೆಲಿಂಗ್ ಸೇರಿದಂತೆ ನೇಮಕಾತಿಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವುದನ್ನು ವಿವರಿಸಿದ್ದಾರೆ.
ಶಾಲಾ ಕಾಲೇಜುಗಳು ಆರಂಭವಾದ ನಂತರ ಸ್ಥಳ ನಿಯುಕ್ತಿ ಪಡೆದಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಈ ಕುರಿತು ಅಪಾರ ಕಾಳಜಿ ಇದ್ದು, ಯಾರೂ ಸಹ ಆತಂಕ ಪಡುವ ಅಗತ್ಯವೇ ಇಲ್ಲ. ಇದಕ್ಕೆ ನಿಯಮಗಳಲ್ಲಿ ಸಹ ಯಾವುದೇ ತೊಂದರೆ ಇಲ್ಲ.
ಕಾಲೇಜು ಆರಂಭದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ಈಗಾಗಲೇ ಭರವಸೆ ನೀಡಿದ್ದಾರೆ.
ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಕುರಿತು ಸರ್ಕಾರಕ್ಕೆ ಅಪಾರ ಕಾಳಜಿಯಿದ್ದು, ಯಾವುದೇ ಆತಂಕ ಪಡುವುದು ಬೇಡ.
ಸರ್ಕಾರದ ಮನವಿಗೆ ಸ್ಪಂದಿಸಿ ಧರಣಿ ಕೈಬಿಡಬೇಕೆಂಬುದು ನನ್ನ ಕಳಕಳಿಯ ಮನವಿ.
ತಾವೆಲ್ಲಾ ಮುಂದೆ ಕನಿಷ್ಟ 20-30 ವರ್ಷಗಳ ಕಾಲ ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಜವಾಬ್ದಾರಿ ಉಳ್ಳವರು.
ನಾನು ಈವರೆಗೆ ತೋರಿರುವ ಆಸ್ತೆ, ತೆಗೆದುಕೊಂಡಿರುವ ಕ್ರಮ ತಮಗೆಲ್ಲಾ ಗೊತ್ತಿದೆ.
ನಾನು ಖಾತೆ ಸ್ವೀಕಾರ ಮಾಡುವ ಮುಂಚಿನಿಂದಲೂ ತಮ್ಮೊಡನೆ ನಿಂತಿದ್ದೇನೆ.
ಸರ್ಕಾರ ಕೊಟ್ಟಿರುವ ಮಾತಿನ ಆಧಾರದ ಮೇಲೆ ದಯವಿಟ್ಟು ಮುಷ್ಕರ ಇಲ್ಲಿಗೇ ಕೈಬಿಡಿ.
ನಾನು ಗುಣಮುಖನಾದ ತಕ್ಷಣ ಈ ಕುರಿತು ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.