ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವೀಡಿಯೋ ಕಾನ್ಫರೆನ್ಸ್ ನಡೆಸಿ ಮಳೆಯಿಂದಾಗಿರುವ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಳೆ ಹಾನಿ ಕುರಿತು ಡಿಸಿ, ಜಿ.ಪಂ. ಸಿಇಒ ಹಾಗೂ ಎಸ್ಪಿಗಳೊಂದಿಗೆ ಬಿಎಸ್ ವೈ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ಭಾರಿ ಮಳೆ ಹಾಗೂ ಪ್ರವಾಹ ಬಾಧಿತ ಪ್ರದೇಶಗಳಲ್ಲಿನ ಜನ-ಜಾನುವಾರು ಸುರಕ್ಷತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಅನಾಹುತ ಸಂಭವಿಸಿದ ಜಿಲ್ಲೆಗಳಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರವಾಸ ಮಾಡುತ್ತಿದ್ದಾರೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿಸುತ್ತಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯತತ್ಪರಾಗಿ, ಜನ-ಜಾನುವಾರುಗಳ ರಕ್ಷಣೆಗೆ ಗಮನಹರಿಸಬೇಕು ಎಂದರು.
ತುರ್ತು ಕ್ರಮಗಳಿಗೆ ಬೇಕಾದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಒಟ್ಟು 800 ಕೋಟಿ ರೂ. ಗಳನ್ನು ಬಳಸಿಕೊಂಡು, ಯುದ್ಧೋಪಾದಿ ಕೆಲಸ ನಿರ್ವಹಿಸಿ ಎಂದು ಬಿಎಸ್ ವೈ ಹೇಳಿದರು.
ಮಾನವೀಯತೆ, ದಕ್ಷತೆ ಹಾಗೂ ಪಾರದರ್ಶಕವಾಗಿ ಪರಿಹಾರ, ಇನ್ನಿತರ ಕೆಲಸಗಳನ್ನು ನಿಭಾಯಿಸಬೇಕು. ನೊಂದವರ ನೋವಿಗೆ ಮಿಡಿಯಬೇಕು. ಪ್ರತಿಯೊಂದು ಕೆಲಸದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಂದುವರಿಯಿರಿ ಎಂದು ಅಧಿಕಾರಿಗಳಿಗೆ ಸಿಎಂ ತಿಳಿಸಿದ್ದಾರೆ.