ಯಾದಗಿರಿ: ರಾಜ್ಯದಲ್ಲಿ ಈ ಹಿಂದೆ ಎಂದೂ ಕಣದಂತ ಪ್ರವಾಹ ಉದ್ಭವಿಸಿದೆ. ಜನರ ಸಂಕಷ್ಟಗಳಿಗೆ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಶುಕ್ರವಾರ ಸಂಜೆ ಭೀಮಾ ನದಿ ಪ್ರವಾಹ ಪೀಡಿತ ಶಹಾಪುರ ತಾಲ್ಲೂಕಿನಲ್ಲಿ ಹುರುಸಗುಂಡಗಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು.
ನಮ್ಮ ಕಾರ್ಯಕ್ಕೆ ಕೇಂದ್ರ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಆರ್ ಅಶೋಕ ಹೇಳಿದರು.
ರಾಜ್ಯದಲ್ಲಿ ಪ್ರವಾಹ ಪೀಡಿತ ಗ್ರಾಮಗಳ ಜನರ ರಕ್ಷಣೆಗಾಗಿ ಸರ್ಕಾರ ಕೇಂದ್ರದಿಂದ 12ಎನ್ ಡಿಆರ್ ಎಫ್ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 5 ಸಾವಿರ ಜನರನ್ನು ಕಾಳಜಿ ಕೇಂದ್ರಗಳಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 44 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಜನರಿಗೆ ತಾತ್ಕಾಲಿಕ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು ಅವರ ಸಂಕಷ್ಟಗಳಿಗೆ ಅಧಿಕಾರಿಗಳು ಸಮಯ ಪ್ರಜ್ಞೆಯೊಂದಿಗೆ ಸ್ಪಂದಿಸಬೇಕು ಇದರಲ್ಲಿ ನಿರಾಸಕ್ತಿ ತೋರಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಕಂದಾಯ ನಿರೀಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದವರು ಹೇಳಿದರು.
ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಇಲ್ಲಿಯವರೆಗೆ 318 ಮನೆಗಳು ಪೂರ್ಣ ಪ್ರಮಾಣದಲ್ಲಿ ಬಿದ್ದಿವೆ. ಆ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ, ಭಾಗಶಃ ಹಾನಿಯಾದ 1700 ಕುಟುಂಬಸ್ಥರಿಗೆ ತಲಾ 50 ಸಾವಿರ ರೂಪಾಯಿ, ನೀರು ನುಗ್ಗಿದ ಮನೆಗಳ ತಲಾ ಕುಟುಂಬಗಳಿಗೆ ತಲಾ 10 ರೂ. ನೀಡಲಾಗುವುದು ಎಂದರು.
ಪ್ರವಾಹದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದ 100ಕ್ಕೂ ಜನರನ್ನು ರಕ್ಷಿಸಲಾಗಿದೆ ಅವರಲ್ಲಿ ಓರ್ವರು ಸಾವನ್ನಪ್ಪಿದ್ದಾರೆ, 217 ಜಾನುವಾರುಗಳು ಸಾವನ್ನಪ್ಪಿವೆ. ರೈತರ ಬೆಳೆಹಾನಿ ವಿವರ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ವರದಿ ಬಂದ ನಂತರ ಎನ್ ಡಿ ಆರ್ ಎಫ್ ನಿಯಮದಂತೆ ಪರಿಹಾರ ನೀಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.