ಮೈಸೂರು ದಸರಾ ಸಂಭ್ರಮ, ಗೌರವದ ಸಂಕೇತ- ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಮೈಸೂರು ದಸರಾ ಮಹೋತ್ಸವ ಈ ನಾಡಿಗೆ ಅತ್ಯಂತ ಸಂಭ್ರಮದ ಹಾಗೂ ಗೌರವದ ಸಂಕೇತ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ಶನಿವಾರ ನಡೆದ ದಸರಾ ಮಹೋತ್ಸವದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಹಂಪಿಯ ಮಹಾನವಮಿ ದಿಬ್ಬದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಆಚರಿಸುತ್ತಿದ್ದ ದಸರಾ ಉತ್ಸವವನ್ನು ಮೈಸೂರಿನ ಅರಸರು ಮುಂದುವರಿಸಿದರು. ರಾಜಪ್ರಭುತ್ವದ ನಂತರ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ದಸರಾ ಎಂದರೆ ಎಲ್ಲೆಡೆ ಸಂಭ್ರಮ- ವೈಭವ ಮನೆ ಮಾಡಿರುತ್ತದೆ. ಆದರೆ ಈ ಬಾರಿ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದವರು ಹೇಳಿದರು.
ಜಾಗತಿಕವಾಗಿ ಸಮಸ್ಯೆ ಉಂಟುಮಾಡಿರುವ ಕೊರೊನಾ ಸಾಂಕ್ರಾಮಿಕ ಸೋಂಕು ಹರಡುವುದನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇರುವುದರಿಂದ ದಸರಾ ಮಹೋತ್ಸವದ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸುತ್ತಿಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಆದರೆ ದಸರಾ ಮಹೋತ್ಸವದ ಸಂಪ್ರದಾಯ ಮತ್ತು ಪರಂಪರೆಯನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಂದಿಧ್ವಜ ಪೂಜೆ ಹಾಗೂ ಜಂಬೂಸವಾರಿ ಕಾರ್ಯಕ್ರಮಗಳನ್ನು ಮಾತ್ರ ಆಚರಿಸಲಾಗುತ್ತಿದೆ ಎಂದರು.