ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಟ ನಡೆಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕ್ಷೇತ್ರದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿದರು.
ಆರ್. ಆರ್. ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇಗೆಲ್ಲುತ್ತದೆ ಎಂದು ಹೇಳಿದ ಡಿಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ. ಇಲ್ಲಿ ಅವರ ಆಟ ನಡೆಯಲ್ಲ ಎಂದರು.
ಕೇವಲ ಒಣ ರಾಜಕೀಯ ಮಾಡುವುದರಿಂದ, ಟೀಕೆಗಳನ್ನು ಮಾಡುತ್ತ ಕೂರುವುದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಯಷ್ಟೇ ಚರ್ಚೆಯ ವಿಷಯ ಎಂದು ಡಿಸಿಎಂ ಹೇಳಿದರು.
ಈಗಾಗಲೇ ಕ್ಷೇತ್ರದಲ್ಲಿ ಮುನಿರತ್ನ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಇವರು ಕ್ಷೇತ್ರದಲ್ಲಿ ಸದಾ ಇರುತ್ತಾರೆ. ಹಾಗೆ ಬಂದು, ಹೀಗೆ ಹೋಗುವವರಿಗೆ ಮತ ಹಾಕಿ ಪ್ರಯೋಜನವಿಲ್ಲ. ಅಂಥವರು ಯಾರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಡಿಸಿಎಂ ಮಾರ್ಮಿಕವಾಗಿ ವಿಪಕ್ಷ ನಾಯಕರನ್ನು ಟೀಕಿಸಿದರು.
ಎಚ್.ಡಿ. ಕುಮಾಸ್ವಾಮಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಬಂದು ಹೋಗಬಹುದು. ಚುನಾವಣೆ ಸಮಯದಲ್ಲಿ ಬಂದು ಹೋಗುವ ನಾಯಕರಿಂದ ಜನರಿಗಾಗಲಿ, ಕ್ಷೇತ್ರಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಯಾವ ನಾಯಕರ ಪ್ರಭಾವವೂ ಇಲ್ಲಿ ಇಲ್ಲ ಎಂದು ಅಶ್ವತ್ಥನಾರಾಯಣ್ ಹೇಳಿದರು.