ಹೆಚ್.ಡಿ.ಕೋಟೆ, (ಮೈಸೂರು): ದಸರಾ ಬಳಿಕ ಮೈಸೂರು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅದಾಲತ್ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪಕ್ಷ ಸಂಘಟನೆಗಾಗಿ ಇಲ್ಲಿನ ಸಂಗನೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಸಚಿವರು ಮಾತನಾಡಿದರು.
ಹೆಚ್.ಡಿ. ಕೋಟೆಯಲ್ಲಿ ಮೊದಲ ಕಂದಾಯ ಅದಾಲತ್ ಹಮ್ಮಿಕೊಳ್ಳಲಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದವರು ತಿಳಿಸಿದರು.
ನೀರಾವರಿ, ಲೋಕೋಪಯೋಗಿ ಹಾಗೂ ಸಮಾಜಕಲ್ಯಾಣ ಇಲಾಖೆ ಇರಬಹುದು. ಈ ಭಾಗಗಳಲ್ಲಿ ಅದಾಲತ್ ಗಳನ್ನು ಮಾಡುತ್ತೇನೆ. ಈ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು ಈ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಸಚಿವರು ಹೇಳಿದರು.
ಗ್ರಾಮೀಣ ಭಾಗದ ಎಲ್ಲ 8 ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲೂ ಸಂಚಾರ ಮಾಡಿ ಪಕ್ಷದ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಪ್ರವಾಸದ ವೇಳೆ ಪಕ್ಷದ ಕಾರ್ಯಕರ್ತರಿಗೆ ಆಯಾ ಭಾಗದ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅವರ ವೈಯುಕ್ತಿಕ ಕೆಲಸವನ್ನು ಯಾರೂ ಕೇಳುವುದಿಲ್ಲ. ನ್ಯಾಯಯುತವಾದ ಕೆಲಸವಿದ್ದರೆ ಅದನ್ನು ಮಾಡಿಕೊಡಬೇಕು. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆಂದರು.
ಈ ಕ್ಷೇತ್ರದಲ್ಲಿ ಸಿದ್ದರಾಜು ಅವರು ಶಾಸಕರಾಗಿ ಆಯ್ಕೆಯಾಗಬೇಕು. ಇದಕ್ಕೆ ಮೊದಲು ಕಾರ್ಯಕರ್ತರು ಬಲಗೊಳ್ಳಬೇಕು. ಹಾಗಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರು ಗೆಲ್ಲಬೇಕು. ಅಲ್ಲದೆ, ಸಿದ್ದರಾಜು ಅವರು, ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಯಾವ ಯಾವ ಕೆಲಸ ಆಗಬೇಕೋ ಅದನ್ನು ಸಿದ್ದರಾಜು ಅವರ ಮುಖಾಂತರ ಮನವಿಗಳನ್ನು ತಂದರೆ ಕೂಡಲೇ ಬಗೆಹರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.