ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ -ಡಿಸಿಎಂ

ಮೈಸೂರು: ನೆರೆ ವಿಷಯ ಇಟ್ಟುಕೊಂಡು ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಸೋಮವಾರ ಡಿಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನೆರೆಯಲ್ಲೂ ರಾಜಕೀಯ ಮಾಡಬೇಕಾದ ಕರ್ಮ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು ಡಿಸಿಎಂ ಟೀಕಿಸಿದರು.
ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಸರಕಾರದ ರಾಜೀನಾಮೆ ಕೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ,
ಎನ್‍ಡಿಆರ್‍ಎಫ್ ಮಾನದಂಡವನ್ನು ಎಲ್ಲ ರಾಜ್ಯಗಳು ಒಪ್ಪಿಕೊಂಡಿವೆ. ಅದರ ನಿಯಮಗಳಂತೆ ರಾಜ್ಯಕ್ಕೂ ಕೇಂದ್ರದಿಂದ ನೆರವು ಬಂದಿದೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲೇ ಹಣ ಬಂದಿದೆ. ಹತ್ತು ವರ್ಷ ಆಡಳಿತ ನಡೆಸಿದ್ದ ಯುಪಿಎ ಸರಕಾರ ರಾಜ್ಯದಲ್ಲಿ ನೆರೆ ಬಂದಾಗಲೆಲ್ಲ ಎಷ್ಟು ನೆರವು ನೀಡಿತ್ತು ಎಂಬುದನ್ನು ಕಾಂಗ್ರೆಸ್ ನಾಯಕರು ಮಾಹಿತಿ ಪಡೆಯಲಿ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದರು.
ಕಾಲೇಜುಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರಕಾರ ಮತ್ತು ಯುಜಿಸಿಯಿಂದ ಈಗಾಗಲೇ ರಾಜ್ಯಕ್ಕೆ ಸ್ಪಷ್ಟವಾದ ಮಾರ್ಗಸೂಚಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಲೇಜುಗಳನ್ನು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು.
ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಜನರಿಗೆ ಸ್ಥಿರ ಸರಕಾರ ಬೇಕಿದೆ. ಆ ನಿಟ್ಟಿನಲ್ಲಿ ಜನರು ಆಲೋಚನೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಹೇಳಿದರು.