ಜಾಗತಿಕ ಸ್ಪರ್ಧೆಗೆ ದೇಶದ ಯುವಕರನ್ನು ಸಜ್ಜುಗೊಳಿಸಬೇಕಾಗಿದೆ -ಮೋದಿ

ಮೈಸೂರು: ಜಾಗತಿಕ ಸ್ಪರ್ಧೆಗೆ ನಮ್ಮ ದೇಶದ ಯುವಕರನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಐತಿಹಾಸಿಕ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.
ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದವರು ತಿಳಿಸಿದರು.
ಜಾಗತಿಕ ಅವಶ್ಯಕತೆಗೆ ತಕ್ಕಂತೆ ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದ್ದು, ಆ ಮೂಲಕ ದೇಶದ ಯುವಕರಿಗೆ ಜಾಗತಿಕ ಮಟ್ಟದ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ತೊಂದರೆಯಾಗಿದೆ. ಸಂತ್ರಸ್ತರ ಬಗ್ಗೆ ನನ್ನ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ಕಾರ್ಯದ ಪ್ರಯತ್ನದಲ್ಲಿವೆ ಎಂದು ಮೋದಿ ಹೇಳಿದರು.
ಪ್ರಾಚೀನ ಕಾಲದಿಂದಲೂ ಮೈಸೂರು ವಿವಿಯಲ್ಲಿ ಪಾರಂಪರಿಕವಾದ, ನಮ್ಮ ಸಂಸ್ಕೃತಿಯ ಶಿಕ್ಷಣವನ್ನು ನೀಡಲಾಗುತ್ತಿತ್ತು. ಈಗ ನಮ್ಮ ದೇಶದ ಯುವಕರಿಗೆ ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ವಿವಿ ಇತಿಹಾಸವನ್ನು ಶ್ಲಾಘಿಸಿದ ಮೋದಿ ಅವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯನ್ನು ಕೊಂಡಾಡಿದರು.
ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬದ ಹೃದಯಪೂರ್ವಕ ಶುಭಾಶಯ ಕೋರಿದರು.
ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು. ಆದರೆ, ಸಂಭ್ರಮದ ಉತ್ಸಾಹಕ್ಕೇನೂ ಕೊರತೆ ಇಲ್ಲ ಎಂದು ಅವರು ಹೇಳಿದರು.