ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ. 1.37 ರಷ್ಟಿದೆ. ಇದನ್ನು ಶೇ. 1ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋವಿಡ್ ನಿರ್ವಹಣೆ ಕುರಿತ ಅಧಿಕಾರಿಗಳು ಮತ್ತು ತಜ್ಞರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.
ಪರೀಕ್ಷೆ ಬೇಗನೆ ಮಾಡಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ ಎಂದವರು ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ. 1.14 ರಷ್ಟಿದೆ. ಇದು ನಾವು ಹೊಂದಿರುವ ಗುರಿಗೆ ಅತಿ ಸಮೀಪದಲ್ಲೇ ಇದ್ದು, ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಸೋಂಕಿತರ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಶೇ. 73ರಷ್ಟು ಹೆಚ್ಚಿಸಿದ್ದು, ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಮೈಸೂರಿನಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮಾಡಿರುವ ದೀಪ ಅಲಂಕಾರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ಪರಿಸ್ಥಿತಿ ಮೇಲೆ ನಿಗಾ ಇರಿಸುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ಮುಂದೆ ಒಂದೆರಡು ದಿನ ಇದೇ ಸ್ಥಿತಿ ಮುಂದುವರಿದರೆ ಅಧಿಕಾರಿಗಳು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ನಿರ್ಬಂಧ ವಿಧಿಸುವುದು ಅನಿವಾರ್ಯ ಎಂದು ಸಚಿವ ಸುಧಾಕರ್ ಅವರು ತಿಳಿಸಿದರು.
ಇಡೀ ದೇಶದಲ್ಲಿ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆರ್ ಟಿಪಿಸಿಆರ್ 80 ಸಾವಿರ, ಆಂಟಿಜೆನ್ ಪರೀಕ್ಷೆ 30-40 ಸಾವಿರದಷ್ಟು ಆಗುತ್ತಿದೆ ಎಂದರು.
ಕೆಲ ಖಾಸಗಿ ಆಸ್ಪತ್ರೆಗಳು ದಲ್ಲಾಳಿಗಳ ಮೂಲಕ ಹಾಸಿಗೆ ಹಂಚಿಕೆ ಮಾಡುವ ದೂರುಗಳಿವೆ. ಇದು ಗಮನಕ್ಕೆ ಬಂದರೆ ದೂರು ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.