ಮೈಸೂರಲ್ಲಿ ಕೊರೊನಾ ಪಾಸಿಟಿವ್, ಸಾವಿನ ಪ್ರಕರಣ ಜಾಸ್ತಿಯಾದರೆ ಸಿಎಂ ಹೊಣೆ -ಲಕ್ಷ್ಮಣ್

ಮೈಸೂರು: ಕೊರೊನಾ ಪಾಸಿಟಿವ್ ಮತ್ತು ಸಾವಿನ ಪ್ರಕರಣ ಮೈಸೂರಲ್ಲಿ ಜಾಸ್ತಿಯಾದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಹೊಣೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಮೈಸೂರು ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ದಸರಾ ಆಚರಿಸುವಾಗ ಸರಳ ದಸರಾ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳನ್ನು ನಿರ್ಬಂಧಿಸಿ ಆದೇಶಿಸಿದ್ದರು. ದಸರಾ ಉದ್ಘಾಟನೆಗೆ ಬಂದ ಮುಖ್ಯಮಂತ್ರಿಗಳು ಪ್ರವಾಸಿ ತಾಣಗಳ ನಿರ್ಬಂಧ ತೆರವುಗೊಳಿಸಿ ಆದೇಶಿಸಿದ್ದು ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದರು.
ಇದರಿಂದ ಕೊರೊನಾ ಸೋಂಕು ಪ್ರಕರಣವೂ ಜಾಸ್ತಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಪ್ರಕರಣ ಜಾಸ್ತಿಯಾದರೆ ಅದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆಯಾಗಬೇಕು ಎಂದು ಎಂ. ಲಕ್ಷ್ಮಣ್ ಹೇಳಿದರು.
ದಸರಾ ಆಚರಿಸುವಾಗ ಸರಳ ದಸರಾ ಎಂದು ಘೋಷಣೆ ಮಾಡಿ ಸುಮಾರು 15 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ ಎಂದರು.
ಕಳೆದ 15 ದಿನಗಳಿಂದ ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಅತಿವೃಷ್ಟಿಯಿಂದ ಸುಮಾರು 184 ಗ್ರಾಮಗಳು ಜಲಾವೃತವಾಗಿವೆ. ಆದರೆ ಇಲ್ಲಿಯವರೆಗೆ ಮುಖ್ಯಮಂತ್ರಿಗಳು ಆ ಕಡೆ ತಿರುಗಿಯೂ ನೋಡಿಲ್ಲ. ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಕಾಣೆಯಾಗಿದ್ದಾರೆ. ಕಂದಾಯ ಮಂತ್ರಿಗಳು ಕಾಟಾಚಾರಕ್ಕೆ ಒಂದು ದಿನ ಪ್ರವಾಸಕ್ಕೆ ಹೋಗುವ ರೀತಿಯಲ್ಲಿ ಹೋಗಿ ಬಂದಿದ್ದಾರೆ. ಸಿಟಿ ರವಿ, ಈಶ್ವರಪ್ಪನವರು ಕೋಮು ವಿಚಾರವಾಗಿ ಹೇಳಿಕೆಗಳನ್ನು ಕೊಡುತ್ತ ತಿರುಗುತ್ತಿದ್ದಾರೆ. ಬಿಜೆಪಿ ಮಹಾಶಯರಿಗೆ ಬೈ ಎಲೆಕ್ಷನ್ ಗೆಲ್ಲುವುದೇ ಗುರಿಯಾಗಿದೆ ಎಂದು ಲಕ್ಷ್ಮಣ್ ದೂರಿದರು.
ಇದೊಂದು ಮಾನವೀಯತೆ ಇಲ್ಲದಿರುವ ಸರ್ಕಾರ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ ನೆರೆ ಪರಿಹಾರ ಮತ್ತು ನಿರ್ವಹಣೆಯಲ್ಲಿ ಭಾರೀ ಮೋಸವಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಂಜುಳಾ ಮಾನಸ ಮತ್ತಿತರರು ಉಪಸ್ಥಿತರಿದ್ದರು.