ಮೈಸೂರು: ದಸರಾ ಅಂಗವಾಗಿ ಗುರುವಾರ ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ ಮಹತ್ವ, ಇತಿಹಾಸ ಮತ್ತು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ವಿವರಿಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನದ ಬಳಿ ದೇಶ ವಿದೇಶದಿಂದ ಆಗಮಿಸಿದ ಭಕ್ತಾದಿಗಳಿಗೆ ಅಪೂರ್ವ ಸ್ನೇಹ ಬಳಗದ ಸದಸ್ಯರು ಮೈಸೂರು ಪೇಟ ಹಾಕಿಕೊಂಡು ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ ನ ಮಹತ್ವ ಹಾಗೂ ಅದರ ಇತಿಹಾಸ ಮತ್ತು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ವಿವರಿಸಿದರು.
ಆ ನಂತರ ಮಾಸ್ಕ್ ವಿತರಿಸಲಾಯಿತು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಈ ಸಂದರ್ಭದಲ್ಲಿ ಮಾತನಾಡಿ, ಸಂತೋಷದ ಸಂಕೇತ ಸಿಹಿ.
ಆದರೆ ಇದು ಕೆಲವರು ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್
ತಿಂದರೆ ಆರೋಗ್ಯ ವೃದ್ಧಿಸುತ್ತದೆ. ಕಡ್ಲೆ ಹಿಟ್ಟು ಚರ್ಮದ ಕಾಯಿಲೆ ಗುಣಪಡಿಸುತ್ತದೆ. ಸಕ್ಕರೆಯಲ್ಲಿ ಆಮ್ಲಜನಕ ಹೆಚ್ಚಾಗಿದ್ದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪದ ಅಂಶದಿಂದ ಮೂಳೆ ಸವೆತ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮೈಸೂರು ಪಾಕ್ ತಿನ್ನಲು ಅಚ್ಚುಮೆಚ್ಚು ಎಂದು ಹೇಳಿದರು.
ನಗರ ಪಾಲಿಕಾ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಮಾತನಾಡಿ, ಉದಾಸೀನ ತೋರದೆ ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಮೊದಲ ಆರೋಗ್ಯ ಮದ್ದಾಗಿದೆ ಪ್ರವಾಸಿಗರೆ ದಸರಾ ನೋಡಲು ಮೈಸೂರಿಗೆ ಬರುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು, ರಾಕೇಶ್ ಕುಂಚಿಟಿಗ, ದೀಪಕ್, ಶಶಿ ಹಾಗೂ ಇನ್ನಿತರರು ಇದ್ದರು.