ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಿರೇಬಾಗೇವಾಡಿಯಲ್ಲಿಯೇ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಗ್ರಾಮದ ಬಳಿ ಮಂಜೂರು ಮಾಡಲಾಗಿರುವ ಜಮೀನನ್ನು ಶನಿವಾರ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜತೆ ಡಿಸಿಎಂ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ನೂರು ಕೋಟಿ ರೂಪಾಯಿ ಒದಗಿಸಲಾಗುವುದು ಉಪ ಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ ಅವರು ಹೇಳಿದರು.
ಈಗಾಗಲೇ 127 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಇಲ್ಲಿ ಅಕಾಡೆಮಿಕ್ ಮತ್ತು ಆಡಳಿತ ಕೇಂದ್ರ ಎರಡೂ ಕಾರ್ಯನಿರ್ವಹಿಸಲಿವೆ. ಸ್ಥಳೀಯ ರೈತರು ಸ್ವ ಇಚ್ಛೆಯಿಂದ ಜಮೀನು ನೀಡಲು ಮುಂದಾದರೆ ಮಾತ್ರ ಖರೀದಿಸಲಾಗತ್ತದೆ. ಆದರೆ ಜಮೀನು ನೀಡುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ ಎಂದರು.
ವಿಶ್ವ ವಿದ್ಯಾಲಯದ ಸ್ಥಾಪನೆಗೆ ನಿಗದಿಪಡಿಸಿರುವ ಸ್ಥಳದಲ್ಲಿಯೇ ನಡೆಯುತ್ತಿರುವ ಬಹು ಗ್ರಾಮ ಕುಡಿಯುವ ನೀರು ಯೋಜನೆ ರದ್ದು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದರು.
ಜಮೀನು ನಿಗದಿಗೆ ಸಂಬಂಧಿಸಿದಂತೆ ರಾಜಕೀಯ ಚರ್ಚೆ ಮಾಡಲ್ಲ. ಆದರೆ ವಿಶ್ವ ವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ವಿಶ್ವವಿದ್ಯಾಲಯದ ನೂತನ ಆವರಣದಲ್ಲಿವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಅದೇ ರೀತಿ
ಕಿತ್ತೂರಿನಲ್ಲಿ ಕೂಡ ಇತರೆ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು.
ಪ್ರಸ್ತಾವಿತ ಜಮೀನಿನಲ್ಲಿ ಇರುವ ಮಲ್ಲಯ್ಯಜ್ಜನ ದೇವಸ್ಥಾನವನ್ನು ಖಂಡಿತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಡಿಸಿಎಂ ಭರವಸೆಯನ್ನು ನೀಡಿದರು.