ರಾಜ್ಯೋತ್ಸವ ಪ್ರಶಸ್ತಿ ‘ನನಗೆ ಕೊಡಬೇಡಿ’ ಎನ್ನುತ್ತಿರುವ ವಿಶೇಷ ಪ್ರಸಂಗ

ಜಿ.ಆರ್. ಸತ್ಯಲಿಂಗರಾಜು
ಮೈಸೂರು: ರಾಜ್ಯೋತ್ಸವ ಪ್ರಶಸ್ತಿ ಹೊಡೆದುಕೊಳ್ಳಲು ನಾನಾ ರೀತಿ ತಂತ್ರ ಅನುಸರಿಸುವುದು ಹೊಸತಲ್ಲ.
ಆದರೆ ಬರಲಿರುವ ಪ್ರಶಸ್ತಿಯನ್ನ ಬೇಡವೇಬೇಡ ಎಂದಿರುವ ವಿಶೇಷ ಮತ್ತು ವಿಚಿತ್ರ ಘಟನೆಗೆ ಈ ವರ್ಷ ಸಾಕ್ಷಿಯಾಗಿದೆ. ಎಂದಿನಂತೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾ? ಕೊರೊನಾ ಹಿನ್ನೆಲೆಯಲ್ಲಿ ರದ್ದುಗೊಳಿಸಬೇಕಾ? ಎಂಬ ಗೊಂದಲಕ್ಕೆ ತೆರೆ ಎಳೆದು, ಪ್ರಶಸ್ತಿ ನೀಡಲು ತೀರ್ಮಾನಿಸಿದ ಸರ್ಕಾರದ ಮುಂದೆ ಒಂದೂವರೆ ಸಾವಿರದಷ್ಟು ಅರ್ಜಿಗಳು ಬಂದವು.
ಇದರಲ್ಲಿ ಹಲವರ ಪರಿಚಯದ ವಿವರ ನೂರಾರು ಪುಟಗಳ ಪುಸ್ತಕದಂತೆ ಇದ್ದವು, ಕೆ.ಜಿ.ಗಟ್ಟಳೆ ತೂಗುತ್ತಿದ್ದವು.
ಅದರ ಪರಿಷ್ಕರಣೆಗಾಗಿ ಕ್ಷೇತ್ರಾವಾರು ವಿಭಜಿಸಿ, ಉಪ ಸಮಿತಿಗಳನ್ನ ರಚಿಸಲಾಗಿತ್ತು. ಆ ಸಮಿತಿಗಳು 1:4 ರಂತೆ ಅರ್ಹರ ಹೆಸರಿನ ಪಟ್ಟಿ ತಯಾರಿಸಿಕೊಟ್ಟಿದ್ದವು.
ಇದರಲ್ಲಿ ಅಂತಿಮವಾಗಿ ಆಯ್ಕೆ ಮಾಡಲು ಮುಖ್ಯಮಂತ್ರಿ ನೇತೃತ್ವದ ಸಮಿತಿ ಸಭೆ ನಡೆಯಿತು.
ಇದರಲ್ಲಿ ಪತ್ರಕರ್ತ ವಿಭಾಗದಲ್ಲಿ ಮಹದೇವ ಪ್ರಕಾಶ್ ಹೆಸರನ್ನ ಖುದ್ದಾಗಿ ಮುಖ್ಯಮಂತ್ರಿಯೇ ಪ್ರಸ್ತಾಪಿಸಿದರು. ಬಹುತೇಕವಾಗಿ ಇದು ಅಂತಿಮವಾಗುತ್ತಿತ್ತು.
ಆದರೆ ಈ ಸುಳುಹು ಸಿಕ್ಕ ಮಹದೇವ ಪ್ರಕಾಶ್, ಈ ಪ್ರಶಸ್ತಿ ಬೇಡ ಎಂದು ಹೇಳಿಬಿಟ್ಟಿದ್ದಾರೆ.
ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರೀಗ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರು.
ಈ ಹುದ್ದೆಯಲ್ಲಿದ್ದು ರಾಜ್ಯೋತ್ಸವ ಪ್ರಶಸ್ತಿ ಪಡೆದರೆ, ಅಧಿಕಾರ ಬಳಸಿ ಪಡೆದಿದ್ದು ಎಂಬ ಟೀಕೆ ಎದುರಾಗುತ್ತೆ, ಮುಖ್ಯ ಮಂತ್ರಿಗೂ ಮುಜುಗರ ಎದುರಾಗುತ್ತೆ ಎಂಬ ಕಾರಣದಿಂದ ಮಹದೇವ ಪ್ರಕಾಶ್, ತನ್ನನ್ನ ಪರಿಗಣಿಸಿದ್ದಕ್ಕೆ ಕೃತಜ್ಞತೆ ಹೇಳಿ, ಪ್ರಶಸ್ತಿ ಬೇಡ. ಬೇರೊಬ್ಬ ಪತ್ರಕರ್ತರಿಗೆ ನೀಡಿ ಎಂದಿದ್ದಾರೆ. ಇದು ವಿಶೇಷ ಪ್ರಕರಣ.
1971ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದುಕೊಂಡೇ ‘ಭಾರತ ರತ್ನ’ ಪಡೆದಿದ್ದರು. ಅನೇಕ ಪದ್ಮಪ್ರಶಸ್ತಿಗಳನ್ನೂ ಪಡೆದಿದ್ದರು. ಅದು ತನಗೆ ತಾನೇ ಪ್ರಶಸ್ತಿ ಕೊಟ್ಟುಕೊಂಡರು ಎಂಬ ಟೀಕೆಗೆ ಸಿಲುಕಿದ್ದ ಘಟನೆಗಳು ಇದ್ದು, ಇದಕ್ಕೆ ವಿರುದ್ದವಾದ ನಿಲುವು ತಳೆದು, ಅಧಿಕಾರದಲ್ಲಿದ್ದಾಗ ತಾನಾಗೇ ಒಲಿದು ಬಂದ ಪ್ರಶಸ್ತಿಯೂ ಬೇಡ ಎಂಬ ನಿರ್ಧಾರ ಮಹದೇವ ಪ್ರಕಾಶ್ ಪ್ರಕಟಿಸಿದ್ದಾರೆ.