ಜಿ.ಆರ್.ಸತ್ಯಲಿಂಗರಾಜು
ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬಂಡಾಯ, ಇತರೆ ಕಾರಣದಿಂದ ದೇಶದ ಪ್ರಧಾನಿಯನ್ನ ರಾಜೀನಾಮೆ ಕೊಡುವಂತೆ ಒತ್ತಾಯಿಸುವುದು, ಅವರು ಕೊಡಲ್ಲ ಎನುವಂಥ ಉದಾಹರಣೆಗಳೇ ತುಂಬಿರುವುದರ ನಡುವೆ ಸಂಬಳ ಸಾಲುತ್ತಿಲ್ಲ ಎಂಬ ಕಾರಣದಿಂದ ಪ್ರಧಾನಿ ಹುದ್ದೆ ತ್ಯಜಿಸುವ ಮಾತಾಡುತ್ತಿರುವುದು ಮತ್ತು ಬದಲಿ ಪ್ರಧಾನಿಯಾಗುತ್ತಾರೆ ಎನಿಸಿಕೊಂಡಿರುವ ಹಾಲಿ ಮಂತ್ರಿಯನ್ನ ಪಬ್ ಮತ್ತು ರೆಸ್ಟೊರೆಂಟ್ ಗೆ ಜೀವಮಾನ ಪರ್ಯಂತ ಪ್ರವೇಶ ನಿರ್ಬಂಧಿಸಿರುವ ಎರಡು ವಿಶೇಷ-ವಿಚಿತ್ರ ಘಟನೆಗಳಿಗೆ ಬ್ರಿಟನ್ ಸಾಕ್ಷಿಯಾಗಿದೆ.
ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ.
ಕೊರೊನಾ ನಿರ್ವಹಣೆಯಲ್ಲಿ ವಿಫಲ ಎಂಬುದರ ಜತೆಗೆ, ಆರ್ಥಿಕ ಕ್ರಮಗಳಿಂದಲೂ ಪ್ರಧಾನಿಗೆ ವಿರೋಧ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆ ತ್ಯಜಿಸುವ ಇಂಗಿತ ವ್ಯಕ್ತಪಡಿಸಿರುವ ಜಾನ್ಸನ್ ಅದಕ್ಕಾಗಿ ನೀಡುತ್ತಿರುವ ಕಾರಣ ‘ಯಾರಿಗೆ ಸಾಲುತ್ತೆ ಸಂಬಳ’ ಎನ್ನುವುದಾಗಿದೆ.
ಹೌದು, ಬೊರಿಸ್ ಜಾನ್ಸನ್ ‘ದಿ ಟೆಲಿಗ್ರಾಫ್’ ಪತ್ರಿಕೆ ಅಂಕಣಗಾರರಾಗಿದ್ದಾಗ ವಾರ್ಷಿಕವಾಗಿ ಭಾರತೀಯ ರುಪಾಯಿಯಲ್ಲಿ ಕೋಟ್ಯಂತರ ವೇತನ ಜತೆಗೆ ಭಾಷಣ ಮಾಡಿಯೂ ಕೋಟಿಗಟ್ಟಳೆ ಸಂಪಾದಿಸುತ್ತಿದ್ದರು.
ಆದರೆ ಬ್ರಿಟನ್ ಪ್ರಧಾನಿಯಾಗಿ ಪಡೆಯುತ್ತಿರುವ ವೇತನ, ಮೊದಲು ಸಂಪಾದಿಸುತ್ತಿದ್ದಕ್ಕಿಂತ ಕಡಿಮೆ.
ಇದು ತನ್ನ ಆರು ಮಕ್ಕಳು, ಮಾಜಿ ಪತ್ನಿಗೆ ಕೊಡಬೇಕಾದ ಪರಿಹಾರಕ್ಕೂ ಸಾಲುತ್ತಿಲ್ಲವಂತೆ. ಹೀಗಾಗಿ ಕಡಿಮೆ ಸಂಬಳ ಇರುವ ಬ್ರಿಟನ್ ಪ್ರಧಾನಿ ಹುದ್ದೆಯನ್ನೇ ತ್ಯಜಿಸುವ ಮಾತಾಡಿದ್ದಾರೆ.
ಇನ್ನೊಂದು ವಿಚಿತ್ರ: ಬೊರಿಸ್ ಜಾನ್ಸನ್ ರಾಜೀನಾಮೆ ಕೊಟ್ಟರೆ ಪ್ರಧಾನಿ ಆಗುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವವರು, ಅಲ್ಲಿನ ಹಾಲಿ ಹಣಕಾಸು ಸಚಿವ ರಿಷಿ ಸುನಾಕ್.
ಇವರು ಇನ್ಫೋಸಿಸ್ ನಾರಾಯಣ ಮೂರ್ತಿ- ಸುಧಾಮೂರ್ತಿ ಅಳಿಯ.
ಮೂಲತಃ ಪಂಜಾಬಿ ಹಿಂದು. ಹುಟ್ಟಿದ್ದು ಓದಿದ್ದು ಬೆಳೆದಿದ್ದೆಲ್ಲ ಅಲ್ಲಿಯೇ.
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿರುವ ಅವರು ರಿಚ್ಮಂಡ್ ಕ್ಷೇತ್ರದ ಸಂಸದರಾಗಿ ಗೆದ್ದು, ಹಣಕಾಸು ಸಚಿವರಾಗಿದ್ದಾರೆ.
ಉಳಿದವರನ್ನೆಲ್ಲ ಹಿಂದಿಕ್ಕಿ ಇವರೇ ಮುಂದಿನ ಪ್ರಧಾನಿ ಎಂದಾಗಿದ್ದಾರೆ.
ಇದೇನಾದರು ನಿಜವಾದರೆ ಭಾರತವನ್ನ ವಸಾಹತು ಮಾಡಿಕೊಂಡು ಶತಶತಮಾನಗಳ ಕಾಲ ಆಳಿದ ಬ್ರಿಟಿಷರನ್ನ ಭಾರತೀಯ ಅದರಲ್ಲು ಕರ್ನಾಟಕದ ಅಳಿಯ ಆಳುವುದು ಐತಿಹಾಸಿಕ ದಾಖಲೆ ಆಗಿಬಿಡುತ್ತೆ.
ಅಂದ ಹಾಗೆ ಈ ಭಾವೀ ಪ್ರಧಾನಿ ಪ್ರತಿನಿಧಿಸುತ್ತಿರುವ ಸಂಸತ್ ಕ್ಷೇತ್ರದ ಪಬ್ ಮತ್ತು ರೆಸ್ಟೋರೆಂಟ್ ನಿಂದ ಜೀವನ ಪರ್ಯಂತ ಪ್ರವೇಶ ನಿಷೇಧ ಮಾಡಿದ್ದಾರೆ. ಇದು ಏಕೆಂದರೆ, ಬ್ರಿಟನ್ ನಲ್ಲು ಕೊರೊನಾ ಹಾವಳಿಯಿಂದ ಶಾಲೆಗೆ ರಜೆ ಇದೆ. ವಿದ್ಯಾರ್ಥಿಗಳಿಗೆ ರಜಾ ಕಾಲದ ಉಚಿತ ಊಟದ ವ್ಯವಸ್ಥೆ ಇದೆ. ಇದನ್ನ ಮುಂದುವರಿಸುವ ನಿರ್ಣಯದ ಸಮಯದಲ್ಲಿ ರಿಷಿ ಸುನಾಕ್ ಸೇರಿದಂತೆ ಇನ್ನು ಮೂವರು ಸಂಸದರು, ಶಾಲಾಮಕ್ಕಳಿಗೆ ಉಚಿತ ಊಟ ಮುಂದುವರಿಸುವುದು ಬೇಡ ಎಂಬುದರ ಪರ ಕೈ ಎತ್ತಿದ್ದಾರೆ. ಪರಿಣಾಮವಾಗಿ ಇವರು ಪ್ರತಿನಿಧಿಸುವ ರಿಚ್ಮಂಡ್ ಕ್ಷೇತ್ರದ ಪಬ್ ರೆಸ್ಟೋರೆಂಟ್ ಗೆ ಆಜೀವ ಪರ್ಯಂತ ನಿಷೇಧ ಹೇರಿ, ಉಚಿತ ಊಟಕ್ಕೆ ತಮ್ಮ ಪಾಲನ್ನ ಸರಬರಾಜು ಮಾಡುತ್ತಿವೆ.