ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿಯನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗೌರವ ಧನ ವಿತರಿಸಿದರು.
ಮಂಗಳವಾರ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಪೂಜಾ ಕಾರ್ಯ ನೆರವೇರಿಸಿ, ಕಬ್ಬು, ಹಣ್ಣುಬೆಲ್ಲ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊತ್ತು ಸಾಗಿ ಯಶಸ್ವಿಗೊಳಿಸಿದೆ ಎಂದರು.
ಸಂಪ್ರದಾಯದಂತೆ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಗಜಪಡೆಗೆ ಪೂಜೆ ಸಲ್ಲಿಸಿ, ಮಾವುತರು ಹಾಗೂ ಕಾವಾಡಿಗರಿಗೆ ಗೌರವ ಧನ ವಿತರಿಸಲಾಯಿತು ಎಂದರು.
ಮಾವುತರು ಹಾಗೂ ಕಾವಾಡಿಗರಿಗೆ ಗೌರವ ಧನವಾಗಿ 10 ಸಾವಿರ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿಎಫ್ ಅಲೆಕ್ಸಾಂಡರ್, ಗಜಪಡೆಯ ವೈದ್ಯ ಡಾ.ನಾಗರಾಜ್ ಇತರರು ಉಪಸ್ಥಿತರಿದ್ದರು.