ಕನ್ನಡ ನಾಡು, ಭಾಷೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ -ಡಿಸಿಎಂ ಅಶ್ವತ್ಥನಾರಾಯಣ

ರಾಮನಗರ: ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.
ಡಿಸಿಎಂ ಅವರು ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಭಾರತೀಯ ಭಾಷೆ ಮತ್ತು ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಇರುವ ಚೆಲುವ ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು-ನುಡಿಯ ಐಸಿರಿಗೆ ನಾಡ ಕವಿಗಳ ಕೊಡುಗೆ ಮಹೋನ್ನತವಾದದ್ದು ಎಂದರು.
ರಾಜ್ಯದ ಸರ್ವಾಂಗೀಣ ಪ್ರಗತಿಗೆ ಬುನಾದಿ ಹಾಕಿದ ದಿವಂಗತ ಡಿ.ದೇವರಾಜ ಅರಸು ರವರು 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು ಎಮದು ಡಿಸಿಎಂ ತಿಳಿಸಿದರು.
ಕರ್ನಾಟಕದ ಇತಿಹಾಸ ಅಪಾರ ವಿಶಾಲವಾದುದು. ತನ್ನ ಭೌಗೋಳಿಕ ನೆಲೆ ಮತ್ತು ಶ್ರೀಮಂತ ಪರಂಪರೆಯಿಂದಾಗಿ ಭಾರತದ ರಾಜ್ಯಗಳಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು ಮೂರು ಭಾಷೆಯ ಮೇಲೆ ಹಿಡಿತ ಹೊಂದಬೇಕಿದ್ದು, ಮಾತೃ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
ಮೂರರಿಂದ ಆರು ವರ್ಷದ ಮಕ್ಕಳಲ್ಲಿ ಶೇ. 80ರಷ್ಟು ಮೆದುಳಿನ ಬೆಳವಣಿಗೆ ಇರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಹದಿನೈದು ಭಾಷೆಯ ಕಲಿಕೆ ಸಾಧ್ಯ ಎಂದರು.
ಭಾಷಾಂತರ ಹಾಗೂ ಕನ್ನಡ ಭಾಷೆಯನ್ನು ಇಂದು ತಂತ್ರಜ್ಞಾನದ ಮೂಲಕ ಸುಲಭವಾಗಿ ಕಲಿಯಬಹುದಾಗಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಅವರು ತಿಳಿಸಿ, ತಂತ್ರಜ್ಞಾನ ಬಳಸಿ ದೇಶದ ಯಾವುದೇ ಭಾಗದ ಭಾಷೆಯನ್ನು ಕನ್ನಡದಲ್ಲಿ ಭಾಷಾಂತರ ಮಾಡಿ ತಿಳಿದುಕೊಳ್ಳಬಹುದು ಎಂದು ಅವರು ತಿಳಿಸಿದರು.
ರಾಮನಗರ ಜಿಲ್ಲೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ರಾಮನಗರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಕ್ರಿಯವಾಗಿರುವುದು ಸಂತಸದ ಸಂಗತಿ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.