ಕಪ್ಪು ಹಲಗೆಗೆ ಬಣ್ಣ ಹಚ್ಚುವ ರಂಗಸ್ವಾಮಿಗೆ ಸನ್ಮಾನ

ಮೈಸೂರು: ಶಾಲೆಗಳಿಗೆ ತೆರಳಿ ಕಪ್ಪು ಹಲಗೆ (ಬೋರ್ಡ್) ಗೆ ಬಣ್ಣ ಹಚ್ಚುವ ಕಾಯಕ ವ್ಯಕ್ತಿಯನ್ನು ಅಭಿನಂದಿಸಲಾಗಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಶಾಲೆಗಳಲ್ಲಿನ ಕಪ್ಪು ಹಲಗೆಗೆ ಉಚಿತವಾಗಿ ಬಣ್ಣ ಹಚ್ಚುವ ಅಕ್ಷರ ಪ್ರೇಮಿ ರಂಗಸ್ವಾಮಿ ಅವರನ್ನು ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಷನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ವತಿಯಿಂದ ಸನ್ಮಾನಿಸಲಾಯಿತು.
ರಂಗಸ್ವಾಮಿಯವರು ಕಳೆದ 20 ವರ್ಷಗಳಿಂದ ಸರಕಾರಿ ಶಾಲೆಗಳಿಗೆ ಸೈಕಲ್ ನಲ್ಲಿ ತೆರಳಿ ಬ್ಲ್ಯಾಕ್ ಬೋರ್ಡ್ ಗಳಿಗೆ ಬಣ್ಣ ಬಳಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ರಂಗಸ್ವಾಮಿ ಅವರು ಸೈಕಲ್ ಪ್ರೇಮಿ. ಸೈಕಲ್ ನಲ್ಲಿಯೇ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಿ ಸೇವೆ ಮಾಡುತ್ತಿರುವುದು ವಿಶೇಷವಾಗಿದೆ.
ಬಿಳಿಯ ಉಡುಪು ಹಳೆಯ ಸೈಕಲ್. ಸೈಕಲ್ ನಲ್ಲಿ ಅಳವಡಿಸಿರುವ ಚಿಕ್ಕ ಬೋರ್ಡ್‍ನಲ್ಲಿ ವಿದ್ಯೆ ಕಡಿಮೆ ಇದ್ದರೂ ಪರವಾಗಿಲ್ಲ ನಮ್ಮ ನಡತೆ ಶುದ್ಧವಾಗಿರಬೇಕು ಎಂಬ ಸಾಲುಗಳನ್ನು ಬರೆದು ಎಲ್ಲರ ಗಮನ ಸೆಳೆದಿದ್ದಾರೆ
ರಂಗಸ್ವಾಮಿ ಅವರನ್ನು ಸನ್ಮಾನಿಸಿದ ನಂತರ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಅವರು ಮಾತನಾಡಿ, ಸರ್ಕಾರ ಇಂತಹ ಕನ್ನಡ ಅಭಿಮಾನಿಗಳನ್ನು ಗುರುತಿಸಿ ಮುಂದಿನ ವರ್ಷವಾದರೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು.
ಎಲೆಮರೆಕಾಯಿಯಾಗಿ ಕೆಲಸ ಮಾಡುತ್ತಿರುವವರನ್ನು ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಬೇಕು ಎಂದರು.
ಇನ್ನು ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸದೇ ಸಾಧಕರನ್ನು ಸರಕಾರ ಗುರುತಿಸಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಗಸ್ವಾಮಿ ನಮ್ಮಿಂದ ದೊಡ್ಡ ಸೇವೆ ಮಾಡುವುದು ಸಾಧ್ಯವಿಲ್ಲ. ಆದರೆ ನನ್ನ ದೇಶಕ್ಕೆ ಸಣ್ಣದಾದ ಅಳಿಲು ಸೇವೆ ಸಮರ್ಪಿಸಲು ಸಾಧ್ಯವಿದೆ ಅದನ್ನು ನಾನು ಮಾಡುತ್ತಿದ್ದೇನೆ. ಎಲ್ಲರಿಂದಲೂ ಸೇವೆ ಮಾಡಲು ಸಾಧ್ಯವಿದ್ದು ಮನಸ್ಸಿಟ್ಟು ಮಾಡಬೇಕಷ್ಟೆ ಎಂದು ಹೇಳಿದರು.
ನಾನು ಓದಿದ್ದು ಒಂಟಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸುಕಾಗದ್ದ ಬೋರ್ಡ್ ಗೆ ಇದ್ದಿಲು ಹಾಗೂ ತುಂಬೆ ಸೊಪ್ಪನ್ನು ಅರೆದು ಅದಕ್ಕೆ ಹಚ್ಚುವ ಕೆಲಸವನ್ನು ಮೇಷ್ಟ್ರು ನನಗೆ ವಹಿಸುತ್ತಿದ್ದರು. ಇದರಿಂದ ಪ್ರೇರಿಪಿತನಾದ ನಾನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೆಲಸ ಮಾಡುತ್ತಾ ಬಂದಿದ್ದೇನೆ. ಇದು ನನಗೆ ತೃಪ್ತಿ ಕೊಡುತ್ತದೆ ಮುಂದಿನ ದಿನಗಳಲ್ಲೂ ಸಹ ಇದನ್ನು ಮುಂದುವರಿಸಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕ ಗಿರೀಶ್, ಹರೀಶ್ ನಾಯ್ಡು, ದೀಪಕ್, ಜೋಗಿ ಸುನೀಲ್, ಮಹದೇವು, ರಾಜೇಶ, ಕುಮಾರ್ ಆರಾಧ್ಯ, ಡಿ ಕೆ ನಾಗಭೂಷಣ್ ಹಾಗೂ ಇನ್ನಿತರರು ಇದ್ದರು.