ಫಲಿತಾಂಶಕ್ಕೆ ಮುನ್ನ ಸೋಲೊಪ್ಪಿಕೊಂಡಿರುವ ಜಯಚಂದ್ರ -ಸಚಿವ ಎಸ್.ಟಿ.ಎಸ್.

ಮೈಸೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಎರಡೂ ಕಡೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಬುಧವಾರ ಸಚಿವ ಸೋಮಶೇಖರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈಗಾಗಲೇ ಮತ ಯಂತ್ರದ ಬಗ್ಗೆ ಅಪಸ್ವರ ಎತ್ತುವ ಮೂಲಕ ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು ಫಲಿತಾಂಶಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ರಾಜರಾಜೇಶ್ವರಿ ನಗರದಲ್ಲಿ ಶೇಕಡಾವಾರು ಮತದಾನ ಕಡಿಮೆಯಾದರೂ ಬಿಜೆಪಿ ಗೆಲುವು ನಿಶ್ಚಿತ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನನ್ನ ಕ್ಷೇತ್ರದಲ್ಲಿ ಚುನಾವಣೆ ನಡೆದಾಗ ಶೇ. 55ರಷ್ಟು ಮತದಾನ ಆಗಿತ್ತು. ಆಗ ಕೊವಿಡ್ ಇರಲಿಲ್ಲ. ಆದರೆ ನಾನು ಜಯ ಗಳಿಸಿದ್ದೇನೆ ಎಂದರು.
ಆರ್. ಆರ್. ನಗರದಲ್ಲಿ ವಿದ್ಯಾವಂತ ಮತದಾರರಿದ್ದಾರೆ. ಕೊವಿಡ್ ಕಾರಣ ಕಡಿಮೆ ಮತದಾನ ಆಗಿದೆ ಅಷ್ಟೇ ಎಂದರು.
ದಸರಾದಂತೆ ಪಂಚಲಿಂಗ ದರ್ಶನ ಮಹೋತ್ಸವವನ್ನು ಸರಳವಾಗಿ ಆಚರಿಸುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಸೂಚಿಸಿದ್ದಾರೆ. ಹಾಗಾಗಿ ಇಂದು ನಡೆಯಲಿರುವ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ಧರಿಸಲಾಗುತ್ತದೆ ಎಂದು ಅವರು ತಿಳಿಸಿದರು.