ಪಕ್ಷಕ್ಕಾಗಿ ದುಡಿಯೋಣ, ಕಾರ್ಯಕರ್ತರ ಗೆಲ್ಲಿಸೋಣ -ಸಚಿವ ಎಸ್ ಟಿ ಎಸ್

ಮೈಸೂರು: ಪಕ್ಷಕ್ಕಾಗಿ ದುಡಿಯೋಣ, ಕಾರ್ಯಕರ್ತರ ಗೆಲ್ಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚುಂಚನಕಟ್ಟೆಯಲ್ಲಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಸಚಿವರು ಬುಧವಾರ ಮಾತನಾಡಿದರು.
ಪಕ್ಷ ನನಗೆ ಮುಖ್ಯ. ಸುಮ್ಮನೆ ಮೈಸೂರಿಗೆ ಬಂದು ಹೋಗುವ ಸಚಿವ ನಾನಲ್ಲ. ಎಲ್ಲರೂ ಸೇರಿ ಪಕ್ಷಕ್ಕಾಗಿ ದುಡಿಯೋಣ. ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸೋಣ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯಬೇಕು. ಪಕ್ಷ ಕಾರ್ಯಕರ್ತರ ಬೆನ್ನಿಗೆ ಖಂಡಿತ ನಿಲ್ಲಲಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಸಹ ಕಾರ್ಯಕರ್ತರ ಪರವಾಗಿದ್ದೇನೆ ಎಂದರು.
ಕಾರ್ಯಕರ್ತರನ್ನು ನಾವು ಎಂದೂ ಮರೆಯಬಾರದು. ಕಾರ್ಯಕರ್ತರಿಂದಲೇ ನಾವು ಜಯಗಳಿಸುವುದು. ನಿಮ್ಮ ಶ್ರಮದಿಂದ ಆಯ್ಕೆಯಾದ ನಾವು ಈಗ ನಿಮ್ಮ ಚುನಾವಣೆಯಲ್ಲಿ ನಿಮಗೆ ಶಕ್ತಿ ತುಂಬುವ ಹಾಗೂ ಶ್ರಮವಹಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಯಾರಿಗೆ ಯಾವುದೇ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಚುನಾವಣೆ ಸಂದರ್ಭದಲ್ಲಿ ಇದನ್ನು ಬದಿಗಿಟ್ಟು ಕೆಲಸ ಮಾಡೋಣ ಎಂದು ತಿಳಿಸಿದರು.