ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಳ್ಳಿ -ಅನಂತರಾಮು

ಮೈಸೂರು: ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ಚಿಂತನಾಶಕ್ತಿ ಆಲೋಚನಾಶಕ್ತಿ ಬೆಳೆಸಿಕೊಂಡಾಗ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಬಹುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಚಾಲಕ ಅನಂತರಾಮು ತಿಳಿಸಿದರು.
ಸತ್ಯಮೇವ ಜಯತೆ ಸಂಘಟನೆ ವತಿಯಿಂದ ನಗರದ ರಾಮವಿಲಾಸ್ ರಸ್ತೆಯಲ್ಲಿರುವ ಮರಿಮಲ್ಲಪ್ಪ ಶಾಲೆ ಬಳಿ ಸಿ ವಿ ರಾಮನ್ ರವರ 132ನೇ ಜಯಂತಿಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತರಾಮು ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲೇ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದವರು ಸಿ ವಿ ರಾಮನ್ ಎಂದು ಹೇಳಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ವೈ ಡಿ ರಾಜಣ್ಣ ಮಾತನಾಡಿ, ಸಿ.ವಿ.ರಾಮನ್ ಅವರು ಬೆಳಕಿನ ಮಹತ್ವವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜೀವಮಾನ ಸಾಧನೆ ಮಾಡಿದ್ದಾರೆಂದರು.
ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ, ಸರಕಾರಿ ಶಾಲೆಯೆಂದರೆ ಕೆಲವರು ನಿರ್ಲಕ್ಷ್ಯ ತೋರುತ್ತಾರೆ. ಆದರೆ ಭಾರತದಲ್ಲಿ ಸಾಧನೆ ಮಾಡಿದ ಅನೇಕರು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರೇ ಎಂಬುದನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ಸ್ವೀಕರಿಸಬೇಕು ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ನಗರ ಪಾಲಿಕಾ ಮಾಜಿ ಸದಸ್ಯ ಎಂ ಕೆ ಅಶೋಕ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್‍ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಉದ್ಯಮಿ ಅಪೂರ್ವ ಸುರೇಶ್, ಸತ್ಯಮೇವ ಜಯತೆ ಸಂಘಟನೆ ಅಧ್ಯಕ್ಷ ರಾಕೇಶ್, ಎಸ್ ಎನ್ ರಾಜೇಶ್, ವಿನಯ್ ಕಣಗಾಲ್, ಸುಚೇಂದ್ರ, ಕುಮಾರ್ ಗೌಡ, ದೇವರಾಜ್, ರವಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.