ಅರಮನೆ ಆವರಣದಲ್ಲಿ ಶ್ರೀಗಂಧದ ಮ್ಯೂಸಿಯಂ ಸ್ಥಾಪನೆಗೆ ಚಿಂತನೆ -ಸಚಿವ ಎಸ್ ಟಿ ಎಸ್

ಮೈಸೂರು: ಶ್ರೀಗಂಧದ ಮ್ಯೂಸಿಯಂ ಅನ್ನು ಅರಮನೆಯಲ್ಲಿ ತೆರೆಯುವ ಚಿಂತನೆ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದ ಅಶೋಕಪುರಂನಲ್ಲಿರುವ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಸೋಮವಾರ ಸಚಿವರು ವೀಕ್ಷಣೆ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಬಗ್ಗೆ ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಜೊತೆ ಚರ್ಚಿಸಿ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಅನುಮತಿ ಪಡೆಯಲಾಗುವುದು ಎಂದರು.
ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿ ನೂತನ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿತ್ತು. ಅವರೂ ಒಪ್ಪಿಗೆ ನೀಡಿದ್ದರು. ಆದರೆ, ಅರಣ್ಯ ಭವನದಲ್ಲಿ ಜಾಗ ಚಿಕ್ಕದು ಹಾಗೂ ಹೆಚ್ಚು ಜನರನ್ನು ಸೆಳೆಯುವ ಪ್ರದೇಶದಲ್ಲಿ ಇಲ್ಲ. ಇಲ್ಲಿಗೆ ದೊಡ್ಡ ವಾಹನದಲ್ಲಿ ಭೇಟಿ ನೀಡಲೂ ಕಷ್ಟ. ಜೊತೆಗೆ ಅರಮನೆ ಆವರಣದಲ್ಲಿ ಮ್ಯೂಸಿಯಂ ತೆರೆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಆದಾಯ ಸಹ ಹೆಚ್ಚಳಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮ್ಯೂಸಿಯಂ ಅನ್ನು ಅರಮನೆ ಆವರಣದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.
ಬಳಿಕ ಮುಖ್ಯಮಂತ್ರಿಗಳ ದಿನಾಂಕವನ್ನು ಗೊತ್ತುಪಡಿಸಿ ಉದ್ಘಾಟನೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ವೀಕ್ಷಣೆಗೂ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಮ್ಯೂಸಿಯಂ ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಎಪಿಸಿಸಿಎಫ್ ಜಗತ್ ರಾಮ್, ಸಿಸಿಎಫ್ ಹೀರಾಲಾಲ್, ಡಿಸಿಎಫ್ ಗಳಾದ ಪ್ರಶಾಂತ್ ಕುಮಾರ್, ಅಲೆಕ್ಸಾಂಡರ್ ಹಾಗೂ ಎಸಿಎಫ್ ಗಳಾದ ರಂಗಸ್ವಾಮಿ, ಅನುಶಾ ಹಾಜರಿದ್ದರು.