ನ. 11ರಂದು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಘಟಿಕೋತ್ಸವ

ಮೈಸೂರು: ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 11ನೇ ವಾರ್ಷಿಕ ಘಟಿಕೋತ್ಸವ ನ. 11ರಂದು ನಡೆಯಲಿದೆ ಎಂದು ಕುಲಪತಿ ಡಾ. ಸುರೀಮದರ್ ಸಿಂಗ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಾರ್ಷಿಕ ಘಟಿಕೋತ್ಸವವು ಅಂದು ಬೆಳಗ್ಗೆ 11 ಗಂಟೆಗೆ ನಗರದ ಸುತ್ತೂರು ಮಠದದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಅವರ ಸಾನ್ನಿಧ್ಯದಲ್ಲಿ ನೆರವೇರಲಿದೆ ಎಂದರು.
ಆರೋಗ್ಯ ಶಿಕ್ಷಣ ಸಚಿವ ಡಾ|| ಕೆ. ಸುಧಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುವರು ಮತ್ತು ವಿಜೇತರಿಗೆ ಪದಕ ಪ್ರದಾನ ಮಾಡುವರು ಎಂದು ತಿಳಿಸಿದರು.
ಈ ಘಟಿಕೋತ್ಸವದಲ್ಲಿ ಒಟ್ಟು 1436 ವಿದ್ಯಾರ್ಥಿಗಳು ಸ್ನಾತಕಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಆಡಳಿತ ನಿರ್ವಹಣೆ, ಜೀವ ವಿಜ್ಞಾನ ಮತ್ತು ಜೈವಿಕ ವೈದ್ಯಕೀಯ ವಿಜ್ಞಾನದ ನಿಕಾಯದಿಂದ ಪಡೆಯುವವರಿದ್ದಾರೆ.
ಘಟಿಕೋತ್ಸವದಲ್ಲಿ 52 ವಿದ್ಯಾರ್ಥಿಗಳು ಒಟ್ಟು 72 ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ಅವರ ಶೈಕ್ಷಣಿಕ ಉತ್ಕøಷ್ಟತೆಗಾಗಿ ಪಡೆದಿದ್ದು, 46 ವಿದ್ಯಾರ್ಥಿಗಳು ಪಿಹೆಚ್‍ಡಿ ಪದವಿಯನ್ನು ಮತ್ತು 5 ವಿದ್ಯಾರ್ಥಿಗಳು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವಿ (ಡಿಎಂ ಮತ್ತು ಎಂ.ಸಿಹೆಚ್) ಯನ್ನು ಪಡೆಯಲಿದ್ದಾರೆಂದು ಹೇಳಿದರು.
ಜೆಎಸ್‍ಎಸ್ ಎಹೆಚ್‍ಇಆರ್ ಇತ್ತೀಚಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯಲ್ಲಿದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯ ಹೆಜ್ಜೆಯನ್ನಿಡುತ್ತಿದೆ ಎಂದವರು ಹೇಳಿ, ದೇಶದ ಪ್ರಥಮ 50 ಪ್ರಮುಖ ವಿಶ್ವವಿದ್ಯಾನಿಲಯಗಳ ಪೈಕಿ ಜೆಎಸ್‍ಎಸ್ ಎಹೆಚ್‍ಇಆರ್ ಸಂಸ್ಥೆಯು ಕಳೆದ 6 ವರ್ಷಗಳಿಂದ ಸತತವಾಗಿ ಇದ್ದು, ಎನ್‍ಐಆರ್‍ಎಫ್ ನಲ್ಲಿ 33ನೇ ರ್ಯಾಂಕ್ ಪಡೆದುಕೊಂಡಿದೆ ಎಂದರು.
ಪ್ರಸ್ತುತ 149 ಶೈಕ್ಷಣಿಕ ಕಾರ್ಯಕ್ರಮಗಳು ಜೆಎಸ್‍ಎಸ್ ಅಕಾಡೆಮಿಯ 4 ಕಾಲೇಜುಗಳಲ್ಲಿ ಮತ್ತು ಜೆಎಸ್‍ಎಸ್ ಎಹೆಚ್‍ಇಆರ್ ನ 7 ವಿಭಾಗಗಳಲ್ಲಿ ನಡೆಯುತ್ತಿದೆ. ಒಟ್ಟು 7500 ವಿದ್ಯಾರ್ಥಿಗಳು ಅಕ್ಯಾಡೆಮಿಯ ವಿವಿಧ ಕೋರ್ಸುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆಂದು ಅವರು ತಿಳಿಸಿದರು.