ದಾವಣಗೆರೆ: ಸಹಕಾರ ಇಲಾಖೆಗೆ ಆರ್ಥಿಕ ನಿರ್ಭರದಡಿ ಇನ್ನೂ ಹೆಚ್ಚಿನ ಅನುದಾನ ಬೇಕಿರುವುದರಿಂದ 600 ಕೋಟಿ ರೂಪಾಯಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮಕ್ಕಾಗಿ ಸೋಮವಾರ ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಅನ್ನು ಆತ್ಮನಿರ್ಭರ ಯೋಜನೆಯಡಿ ಘೋಷಣೆ ಮಾಡಿತು. ಅದರಲ್ಲಿ ರಾಜ್ಯದ ಪಾಲಾದ 4750 ಕೋಟಿ ರೂಪಾಯಿಗಳು ಬಂದಿದ್ದು, ಇದರ ಮೂಲಕ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ಸಹಕಾರ ಇಲಾಖೆ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದರು.
ಪ್ರತಿವರ್ಷ ಜವಹರಲಾಲ್ ಅವರ ಹುಟ್ಟುಹಬ್ಬದ ಅಂಗವಾಗಿ 7 ದಿನಗಳ ಕಾಲ ಸಹಕಾರ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಹಕಾರ ಕ್ಷೇತ್ರದಿಂದ ಏನೆಲ್ಲ ಬೆಳವಣಿಗೆಗಳಾಗಿವೆ, ಇನ್ನು ಏನು ಮಾಡಲಿದ್ದೇವೆ ಎಂಬುದು ಜನರಿಗೆ ತಿಳಿಸುವಂತಹ ಕಾರ್ಯವನ್ನು ನಾವು ಮಾಡಲಿದ್ದೇವೆ. ಈ ಮೂಲಕ ಸಹಕಾರ ಕ್ಷೇತ್ರವನ್ನು ಜನರಿಗೆ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವ ಕೆಲಸವಾಗುತ್ತದೆ ಎಂದು ಅವರು ತಿಳಿಸಿದರು.
ಕೋವಿಡ್ 19ರ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಜನವರಿ ವೇಳೆಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಕ್ಕೆ ಹಾಕಲು ಸರ್ಕಾರ ತೀರ್ಮಾನಿಸಿತ್ತೇ ವಿನಹ ಇದರಲ್ಲಿ ಯಾವುದೇ ರಾಜಕಾರಣವಿಲ್ಲ ಎಂದರು.
ಆದರೆ, ಕಾಂಗ್ರೆಸ್ ನವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೆ ಏನೂ ಬರುವುದಿಲ್ಲ. ಗ್ರಾಪಂ ಚುನಾವಣೆಗಳು ನಡೆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಕಷ್ಟವಾಗುತ್ತದೆ. ಮಾಸ್ಕ್ ಧರಿಸದೇ ಸಮಸ್ಯೆಗಳಾದರೆ ಎಂಬ ಆತಂಕ ಸರ್ಕಾರವನ್ನು ಕಾಡುತ್ತಿತ್ತು. ಆದರೆ, ಕಾಂಗ್ರೆಸ್ ನವರು ಕೋರ್ಟ್ ಹೋಗಿದ್ದರು. ಇನ್ನು 2-3 ವಾರದೊಳಗೆ ಚುನಾವಣೆ ಘೋಷಣೆಯಾಗಬಹುದು. ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.