ಇವಿಎಮ್ ಅಲ್ಲ; ಅವು ಎಮ್ ವಿಎಮ್ -ಎಂ ಲಕ್ಷ್ಮಣ್

ಮೈಸೂರು: ಇವಿಎಮ್ ಅಲ್ಲ ಅವು ಎಮ್ ವಿಎಮ್ ಆಗಿವೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದರು.
ನಗರದಲ್ಲಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಎಲೆಕ್ಟ್ರಾನಿಕ್ ಮತ ಯಂತ್ರಗಳೆಲ್ಲ ಈಗ ಮೋದಿ ಮತ ಯಂತ್ರಗಳಾಗಿವೆ. ಇವಿಎಮ್ ಅಲ್ಲ ಅವು ಎಮ್ ವಿಎಮ್ ಆಗಿವೆ ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು.
ನಮಗೆ ಇವಿಎಂ ಗಳ ಮೇಲೆ ನಂಬಿಕೆ ಇಲ್ಲ. ಚುನಾವಣೆಗಳನ್ನು ನಡೆಸುವುದಾದರೆ ಬ್ಯಾಲಟ್ ಪೇಪರ್ ಗಳನ್ನು ಬಳಸಿ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗಕ್ಕೆ ಲಕ್ಷ್ಮಣ್ ಮನವಿ ಮಾಡಿದರು.
ಬಿಹಾರದಲ್ಲಿ ಮಹಾಘಟಬಂಧನ್ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತವೆ ಎಂದು ಎಲ್ಲಾ ಸಮೀಕ್ಷೆಗಳು ವರದಿ ಮಾಡಿದ್ದವು. ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡೆದಿದೆ ಅಂದರೇನರ್ಥ? ಬಿಜೆಪಿ ಇವಿಎಮ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಇವಿಎಮ್ ವಿರುದ್ಧ ದೊಡ್ಡ ಜನಾಂದೋಲನವನ್ನೇ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಜನಗಳ ಅಭಿಪ್ರಾಯ ಸಂಗ್ರಹಿಸದೇ ಯೂನಿಟ್ ಗೆ 40 ಪೈಸೆ ಹೆಚ್ಚು ಮಾಡಿದ್ದಾರೆ. ಇದರಿಂದ ಪ್ರತಿ ಬಡ ಕುಟುಂಬಕ್ಕೆ 80 ರೂಪಾಯಿ ಹೊರೆಯಾಗುತ್ತದೆ ಎಂದವರು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.