ರಾಷ್ಟ್ರದಲ್ಲಿ ಕರ್ನಾಟಕದ ಸಹಕಾರ ಮೊದಲ ಸ್ಥಾನಕ್ಕೆ ತರಲು ಶ್ರಮಿಸುವೆ -ಸಚಿವ ಎಸ್.ಟಿ.ಎಸ್

ಚಿಕ್ಕಬಳ್ಳಾಪುರ: ಸಹಕಾರ ಕ್ಷೇತ್ರದಲ್ಲಿ ಕರ್ನಾಟಕವು ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಆರ್ಪಡಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ನಾವು ಅನೇಕ ಯೋಜನೆಗಳ ಮೂಲಕ ಹೆಜ್ಜೆಗಳನ್ನಿಟ್ಟಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಸಾರ್ವಜನಿಕರಿಗೆ ಆರ್ಥಿಕ ಬಲ ತುಂಬುವ ಕಾರ್ಯಕ್ಕೆ ಸಹಕಾರ ಇಲಾಖೆ ಮೂಲಕ ಕರ್ನಾಟಕದಲ್ಲಿಯೇ ಮೊದಲು ಚಾಲನೆ ನೀಡಿರುವುದಾಗಿ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದು, ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ತಿಳಿಸಿದರು.
ಹಿಂದಿನ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿತು. ಆದರೆ, ಬಹುತೇಕ ರೈತ ಫಲಾನುಭವಿಗಳಿಗೆ ಪ್ರಯೋಜನ ಲಭಿಸಿರಲಿಲ್ಲ. 2.30 ಲಕ್ಷ ರೈತರಿಗೆ ಸಾಲ ಮನ್ನಾ ಬಾಕಿ ಇತ್ತು. ಹೀಗಾಗಿ ಒಟ್ಟಾರೆ ಬಾಕಿ ಇದ್ದ 5092 ಕೋಟಿ ರೂಪಾಯಿಯ ಸಾಲ ಮನ್ನಾವನ್ನು ನಮ್ಮ ಸರ್ಕಾರ ಮಾಡಿದೆ. ಇನ್ನು ಚಿಕ್ಕಾಬಳ್ಳಾಪುರ ಹಾಗೂ ಕೋಲಾರದಲ್ಲಿ 40 ಮಂದಿಗೆ ಮಾತ್ರ ಸಾಲಮನ್ನಾ ಬಾಕಿ ಇದ್ದು, ಅದನ್ನು ಸಹ ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ತಿಳಿಸಿದರು.
ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ್ಲ ಚಾಲನೆ ನೀಡಿದರು. ಇದರ ಮೂಲಕ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಸಾಲ ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಚಿವರು ತಿಳಿಸಿದರು.