ಮೈಸೂರು: ಇಬ್ಬರು ಸುಲಿಗೆ ಕೋರರನ್ನು ನಗರದ ಉದಯಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕಲ್ಯಾಣಗಿರಿ ನಗರದ ಯಾರಬ್ ಮಸೀದಿ ಹತ್ತಿರದ ವಾಸಿ ಮೊಹಮ್ಮದ್ ಜಮೀರ್ ಉರ್ ರಹಮಾನ್ (20) ಮತ್ತು ನಗರದ ರಾಘವೇಂದ್ರ ಬಡಾವಣೆ ಈದ್ಗಾ ಮೈದಾನದ ಸಮೀಪದ ನಿವಾಸಿ ಶೊಹೇಬ್ ಅಕ್ತರ್ (21) ಬಂಧಿತ ಆರೋಪಿಗಳು.
ಬಂಧಿತರಿಂದ ಪೊಲೀಸರು 45 ಸಾವಿರ ರೂ. ಮೌಲ್ಯದ 1-ಮೋಟೊ ಕಂಪನಿಯ ಮೊಬೈಲ್ ಫೋನ್, 1-ಲ್ಯಾಪ್‍ಟಾಪ್, ಕೃತ್ಯಕ್ಕೆ ಬಳಿಸಿದ್ದ ಚಾಕು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.
ಇದೇ ನ. 13ರಂದು ಶಕ್ತಿನಗರದಲ್ಲಿ ಶ್ರೀರಾಗ್ ಎಂಬುವರು ತಮ್ಮ ಮನೆ ಬಳಿ ಹೂ ಬಿಡಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ, ಬೆದರಿಸಿ, ಹಲ್ಲೆ ಮಾಡಿ, ಮೋಟೊ ಜಿ4 ಪ್ಲಸ್ ಮೊಬೈಲ್ ಫೋನ್‍ನ್ನು ಕಿತ್ತಿಕೊಂಡು ಹೋಗಿರುತ್ತಾರೆ.
ಅದೇ ದಿನ ಸಂಜೆ ಕಲ್ಯಾಣಗಿರಿ ನಗರದಲ್ಲಿ ಮೊಹಮ್ಮದ್ ಜವಾದ್ ಎಂಬುವರು ಮನೆಯಲ್ಲಿದ್ದಾಗ ವ್ಯಕ್ತಿಯೊಬ್ಬ ಬಂದು ತನಗೆ 10 ಸಾವಿರ ರೂಪಾಯಿ ಹಣ ಕೊಡು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಚಾಕು ತೋರಿಸಿ ಬೆದರಿಸಿದ್ದು, ಹಣ ಕೊಡಲು ನಿರಾಕರಿಸಿದಾಗ ಮನೆಯಲ್ಲಿದ್ದ ಲೆನೆವೊ ಕಂಪನಿ ಲ್ಯಾಪ್‍ಟಾಪ್‍ನ್ನು ತೆಗೆದುಕೊಂಡು ಹೋಗಿರುತ್ತಾನೆ.
ಮೇಲ್ಕಂಡ ಪ್ರಕರಣಗಳ ಸಂಬಂಧ ಉದಯಗಿರಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ನ. 17ರಂದು ರಾಜೀವನಗರ ಮಾದೇಗೌಡ ವೃತ್ತದ ಬಳಿ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಂಧಿತರಿಬ್ಬರನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ, ಇವರು ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡ ಮೇರೆಗೆ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮೈಸೂರು ನಗರದ ಡಿಸಿಪಿ ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ಎಂ.ಎನ್ ಶಶಿಧರ್ ರವರ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪೂಣಚ್ಚ ಎನ್.ಎಂ, ಪಿ.ಎಸ್.ಐ. ಎಂ.ಜೈಕೀರ್ತಿ, ನಟರಾಜ್, ಎ.ಎಸ್.ಐ. ದಿವಾಕರ್ ಹಾಗೂ ಸಿಬ್ಬಂದಿಗಳಾದ ಎಂ.ಶಂಕರ್, ಸಿದ್ದಿಕ್ ಅಹಮದ್, ಮೋಹನ್‍ಕುಮಾರ್, ಕೃಷ್ಣ. ಆರ್.ಎಸ್. ಶಿವರಾಜಪ್ಪ, ಮಾಲತಿರವರುಗಳು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.