ಹೊಸಪೇಟೆ: ಮರಾಠಿ ಗಡಿ-ಭಾಷೆ ವಿಷಯ ಬೇರೆ, ಕರ್ನಾಟಕದಲ್ಲಿ ಅನೇಕ ಜನ ಮರಾಠಿಗರು ವಾಸವಾಗಿದ್ದಾರೆ. ಇಲ್ಲಿಯೇ ಹುಟ್ಟಿ, ಬೆಳದವರಿದ್ದಾರೆ. ಅವರೂ ಸಹ ನಮ್ಮ ಕನ್ನಡಿಗರೇ ಆಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಮರಾಠಾ ಸಮುದಾಯ ನಿಗಮಕ್ಕೆ ಆದೇಶ ಹೊರಡಿಸಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಗುರುವಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇದನ್ನು ಮಹಾರಾಷ್ಟ್ರದವರಿಗಾಗಿ ಮಾಡುತ್ತಿರುವುದಲ್ಲ. ಅವರೆಲ್ಲರೂ ನಮ್ಮೊಂದಿಗೆ ಇರುವ ಮರಾಠಿಗರು. ಹೀಗಾಗಿ ಅವರ ಅನೇಕ ವರ್ಷಗಳ ಬೇಡಿಕೆಯನ್ನು ಈಗ ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರುತಿಳಿಸಿದರು.
ಜಾತಿಗೊಂದು ನಿಗಮ ಮಂಡಳಿಯಂತೆ ನಮ್ಮ ಸರ್ಕಾರ ಮಾಡುತ್ತಿಲ್ಲ. ಇದು ಎಲ್ಲ ಸರ್ಕಾರವಿದ್ದಾಗಲೂ ರಚನೆಯಾಗುವ ಸಾಮಾನ್ಯ ಪ್ರಕ್ರಿಯೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.
ವಿಜಯನಗರವನ್ನು ಹೊಸ ಜಿಲ್ಲೆಯಾಗಿ ಮಾಡುವ ಬಗ್ಗೆ ಪರ-ವಿರೋಧ ಇರುವುದು ಸಹಜ. ಈಗಾಗಲೇ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಹಾಗೂ ಈ ಭಾಗದ ಅನೇಕ ಶಾಸಕರು ನೂತನ ಜಿಲ್ಲೆಯ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ. ಇದಕ್ಕಾಗಿ ಸಚಿವ ಆನಂದ್ ಸಿಂಗ್ ಅವರು ಮೊದಲಿನಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರ ಜೊತೆ ಅನೇಕ ಶಾಸಕರು ಹಾಗೂ ಸಂಘ-ಸಂಸ್ಥೆಗಳ ಬೆಂಬಲವಿತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಸೋಮಶೇಖರ್ ರೆಡ್ಡಿ ಅವರು ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೋಮಶೇಖರ ರೆಡ್ಡಿ ಅವರ ಜೊತೆ ನಾವೆಲ್ಲರೂ ಮಾತನಾಡುತ್ತೇವೆ. ಅವರೂ ಸಹ ನಮ್ಮ ಪಕ್ಷದವರೇ ಆಗಿರುವುದರಿಂದ ಖಂಡಿತವಾಗಿ ಮನವೊಲಿಸುತ್ತೇವೆ. ಸೋಮಶೇಖರ ರೆಡ್ಡಿಯವರು ಒಪ್ಪುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಎಸ್.ಟಿ.ಎಸ್ ಹೇಳಿದರು.
ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ನಮ್ಮ ಪಕ್ಷದಲ್ಲಿ ಇಂಥ ನಿರ್ಧಾರಗಳಿಗೆಲ್ಲ ಹೈಕಮಾಂಡ್ ಅನುಮತಿ ಕೊಡುವ ಪದ್ಧತಿ ಇದೆ. ಹೀಗಾಗಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.