ಸಹಕಾರ ಇಲಾಖೆ ಮೂಲಕ ಪ್ರತಿ ಹಳ್ಳಿಗೂ ಜನೌಷಧ ಕೇಂದ್ರ -ಸಚಿವ ಎಸ್ ಟಿ ಎಸ್

ವಿಜಯಪುರ: ಪ್ರತಿ ಹಳ್ಳಿಹಳ್ಳಿಗೂ ಜನೌಷಧ ಕೇಂದ್ರವನ್ನು ತೆಗೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಸಹಕಾರ ಇಲಾಖೆ ಮೂಲಕ ನಾವು ಚಿಂತನೆ ಮಾಡಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ವಿಜಯಪುರದಲ್ಲಿ ಶುಕ್ರವಾರ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಸಮಾರೋಪ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಪ್ರಧಾನ ಮಂತ್ರಿಗಳ ಜನೌಷಧಿ ಕೇಂದ್ರವನ್ನು ಸಹಕಾರ ಇಲಾಖೆಯ ಮಾರ್ಕೆಟಿಂಗ್ ಫೆಡರೇಷನ್ ಮೂಲಕ ತೆರೆಯುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದ್ದು, ಇದಕ್ಕೆ ಕೇಂದ್ರ ಸಚಿವ ಸದಾನಂದ ಗೌಡರ ಪಾತ್ರ ಬಹಳ ದೊಡ್ಡದಿದೆ. ರಾಜ್ಯದಲ್ಲಿ ಇನ್ನೂ 600 ಜನೌಷಧ ಮಳಿಗೆಯನ್ನು ತೆರೆಯಲು ಕೇಂದ್ರ ಸರ್ಕಾರ ಸೂಚಿಸಿದೆ. ಇದರೊಂದಿಗೆ ಸಹಕಾರ ಇಲಾಖೆ ಮೂಲಕ ನಾವು ಪ್ರತಿ ಹಳ್ಳಿಯಲ್ಲೂ ಜನೌಷಧ ಮಳಿಗೆಯನ್ನು ಸ್ಥಾಪಿಸುವತ್ತ ಕಾರ್ಯಯೋಜನೆ ಹಾಕಿಕೊಳ್ಳುತ್ತೇವೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಸಹಕಾರ ಸಂಸ್ಥೆಗಳಿಂದ ಜನರಿಗೆ ಯಾವೆಲ್ಲ ಯೋಜನೆಗಳನ್ನು ನೀಡಬಹುದು ಎಂಬ ನಿಟ್ಟಿನಲ್ಲಿ ಕಿರು ಹೊತ್ತಿಗೆ ಮಾಡಿ ಎಲ್ಲರಿಗೂ ವಿತರಿಸುವ ಕೆಲಸವನ್ನು ಮುಂದಿನ ವರ್ಷದ ಸಹಕಾರ ಸಪ್ತಾಹ ಕಾರ್ಯಕ್ರಮದೊಳಗೆ ಮಾಡಲಿದ್ದೇವೆ ಎಂದು ಸಚಿವರು ತಿಳಿಸಿದರು.
40 ಸಾವಿರ ಸಹಕಾರ ಸಂಘಗಳ ಮೂಲಕ ರಾಜ್ಯಾದ್ಯಂತ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಅರ್ಬನ್ ಬ್ಯಾಂಕ್ ಸಹಿತ ಎಲ್ಲ ಸಹಕಾರ ಬ್ಯಾಂಕ್ ಗಳು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿ ಉದ್ಯೋಗ ಕಳೆದುಕೊಂಡವರಿಗೆ ಹಾಗೂ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಕಾರ್ಯಯೋಜನೆ ಹಾಕಿಕೊಳ್ಳೋಣ ಎಂದು ಸಚಿವರು ಹೇಳಿದರು.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಶಿವಾನಂದ್ ಪಾಟೀಲ್, ಎಂ.ಸಿ. ಮನಗೂಳಿ, ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.