ನ. 30ರಿಂದ ಸಕಾಲ ಸಪ್ತಾಹ -ಡಾ.ಬಿ.ಆರ್.ಮಮತಾ

ಮೈಸೂರು: ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲ ಮಿತಿಯಲ್ಲಿ ವಿಲೇವಾರಿ ಮಾಡಲು ನ. 30ರಿಂದ ಸಕಾಲ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ಸಕಾಲ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕರಾದ ಡಾ. ಬಿ.ಆರ್.ಮಮತಾ ಅವರು ತಿಳಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ವತಿಯಿಂದ ನಡೆಯುತ್ತಿರುವ ಸಕಾಲ ಸಪ್ತಾಹ ಕುರಿತು ಅವರು ಎಲ್ಲಾ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ರಾಜ್ಯದ ಮುಖ್ಯಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಈ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ಮೂರು ಹಂತದಲ್ಲಿ ಇದನ್ನು ಆಚರಿಸಲಾಗುತ್ತಿದೆ. ಇದೇ ನ. 30ರಿಂದ ಡಿ. 5ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಡಿ. 7ರಿಂದ 11 ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಡಿ. 14ರಿಂದ 19ವರೆಗೆ ಉಳಿದ ಎಲ್ಲಾ ಇಲಾಖೆಗಳಲ್ಲಿ ಸಪ್ತಾಹವನ್ನು ಆಚರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಕಾಲ ಮಿಷನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಸಕಾಲ ತಂಡದಿಂದ ಕಚೇರಿಗಳಿಗೆ ಭೇಟಿ ಹಾಗೂ ತಪಾಸಣೆ, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲದ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಸಕಾಲ ಅರ್ಜಿದಾರರು 15 ಅಂಕಿಯ ಜಿಎಸ್‍ಸಿ ಸಂಖ್ಯೆಯೊಂದಿಗೆ ಸ್ವೀಕೃತಿಯನ್ನು ಪಡೆಯುತ್ತಾರೆ. ಅರ್ಜಿಯ ಹಂತವನ್ನು ನಾಗರಿಕರು ತಮ್ಮ ನೊಂದಾಯಿತ ಮೊಬೈಲ್‍ನಲ್ಲಿ ಪಡೆಯುತ್ತಾರೆ. ಜಿಎಸ್‍ಸಿ ಸಂಖ್ಯೆಯನ್ನು ಬಳಸಿ ಅರ್ಜಿಯ ಹಂತವನ್ನುWWW.sakala.kar.nic.in  ಹಾಗೂ 080-44554455 ಮುಖೇನ ತಿಳಿಯಬಹುದಾಗಿದೆ. ಸೇವಾ ವಿತರಣೆಯಲ್ಲಿ ವಿಳಂಬ ಅಥವಾ ಸಮರ್ಥನೀಯವಲ್ಲ, ತಿರಸ್ಕೃತ ಸಂದರ್ಭಗಳಲ್ಲಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು.