ಡಿ. 5ಕ್ಕೆ ಕರ್ನಾಟಕ ಬಂದ್ ಶತಸಿದ್ಧ -ವಾಟಾಳ್ ನಾಗರಾಜ್

ಮೈಸೂರು, ನ. 29- ಡಿ. 5ಕ್ಕೆ ಕರ್ನಾಟಕ ಬಂದ್ ಶತಸಿದ್ಧ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ನಗರದಲ್ಲಿ ಭಾನುವಾರ ವಾಟಾಳ್ ನಾಗರಾಜ್ ಅವರು ಮೈಸೂರು-ಬೆಂಗಳೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ನ. 30ರ ವರೆಗೆ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ಹಿಂಪಡೆಯಬೇಕು. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಹಠ ಮಾಡಬಾರದು ಎಂದರು.
ಯಡಿಯೂರಪ್ಪನವರಿಂದ ಕರ್ನಾಟಕ ಉದ್ಧಾರ ಆಗೋಲ್ಲ, ಗಡಿನಾಡು ಉದ್ಧಾರ ಆಗೋಲ್ಲ. ಕರ್ನಾಟಕ ಸರ್ಕಾರ ಮರಾಠರ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳರು, ಆಂಧ್ರದವರು, ಮಲೆಯಾಳಿಯವರು ಎಲ್ಲರೂ ಪ್ರಾಧಿಕಾರ ಕೇಳ್ತಾರೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪನವರಿಗೆ ಬುದ್ಧಿ ಇದ್ಯೋ ಇಲ್ವೋ ಗೊತ್ತಿಲ್ಲ. ಎರಡು ವರ್ಷದ ಹಿಂದೆ ನಮ್ಮನ್ನು ಜೈಲಿನಲ್ಲಿಟ್ಟು ತಿರುವಳ್ಳುವರ್ ಪ್ರತಿಮೆ ಮಾಡಿದರು. ಬಸವ ಕಲ್ಯಾಣದಲ್ಲಿ ಚುನಾವಣೆ ಹಿನ್ನೆಲೆ ಅಲ್ಲಿರುವ 30 ಸಾವಿರ ಮರಾಠ ಮತ ಪಡೆಯಲು ಪ್ರಾಧಿಕಾರ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಬರೀ ಬೋಗಸ್ ಮಾಡ್ತಿದ್ದಾರೆ ಎಂದು ವಾಟಾಳ್ ದೂರಿದರು.
ಪ್ರಶೆಯೊಂದಕ್ಕೆ ಉತ್ತರಿಸಿದ ಅವರು ಯತ್ನಾಳ್ ಹಾಗೂ ರೇಣುಕಾಚಾರ್ಯ ಅವರಿಬ್ರೂ ಯಾರ್ರಿ ದರಿದ್ರ..? ನಾಯಿಗಳಿಗಾದ್ರೂ ಉತ್ತರ ಕೊಡ್ತಿನಿ ಆದ್ರೆ ರೇಣುಕಾಚಾರ್ಯ ಹಾಗೂ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಲ್ಲ. ರೇಣುಕಾಚಾರ್ಯ ವೀಡಿಯೋಗಳು ವಾಟ್ಸಾಪ್ ನಲ್ಲಿ ಹರಿದಾಡ್ತಿವೆ. ಅಂತಹವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದರು.