ಮೈಸೂರು: ನಮ್ಮ ರಾಜ್ಯವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಕೇಂದ್ರ ಉಗ್ರಾಣ ನಿಗಮದ ರಾಜ್ಯ ನಿರ್ದೇಶಕ ಡಾ.ಜಿ.ರವಿರವರು ಹೇಳಿದರು.
ನಗರದ ವಿವೇಕಾನಂದ ವೃತ್ತದಲ್ಲಿ ಭಾನುವಾರ ನಡೆದ ಕರ್ನಾಟಕ ಸೇನಾಪಡೆಯ ವತಿಯಿಂದ 65ನೇ ಕರ್ನಾಟಕ ಏಕೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಅದರಲ್ಲೂ ಕನ್ನಡ ನಾಡು-ನುಡಿ-ನೆಲ-ಜಲ ಈ ವಿಚಾರಗಳಿಗೆ ಸಂಬಂದಪಟ್ಟಂತೆ ಕನ್ನಡ ಭುವನೇಶ್ವರಿಯ ಮಕ್ಕಳು ಇನ್ನು ತೀವ್ರತರವಾದ ಹೋರಾಟಕ್ಕೆ ಸಜ್ಜುಗೊಳ್ಳಬೇಕಿದೆ ಎಮದು ಕನ್ನಡಿಗರಿಗೆ ಕರೆ ನೀಡಿದರು.
ರಾಜ್ಯದ ರಕ್ಷಣೆಗೋಸ್ಕರ ನಾವು ಯಾರನ್ನೂ ನಂಬುವ ಸ್ಥಿತಿಯಲ್ಲಿರಬಾರದು. ಹಾಗೇನಾದರು ಅಪಾಯ ಬಂದಲ್ಲಿ ಹೆಗಲಮೇಲಿನ ಶಾಲನ್ನು ಸೊಂಟಕ್ಕೆ ಬಿಗಿದು ಭುವನೇಶ್ವರಿಯ ವೀರ ಪುತ್ರರಂತೆ ಹೋರಾಡಬೇಕು ಎಂದು ಹೇಳಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ನಗರ ಉಪ ಪೆÇೀಲಿಸ್ ಆಯುಕ್ತರಾದ ಡಾ. ಎ ಎನ್ ಪ್ರಕಾಶ್ ಗೌಡ ಅವರು ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಕನ್ನಡ ಮಾತನಾಡುವ ಜನರನ್ನೆಲ್ಲ ಸೇರಿಸಿ ಹರಿದು ಹಂಚಿ ಹೋಗಿದ್ದ ಮಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳನ್ನೆಲ್ಲ ಒಗ್ಗೂಡಿಸಿ 1953ರ ನವೆಂಬರ್ 1ರಂದು ಮೈಸೂರು ರಾಜ್ಯ ವಾಗಿ, ನಂತರ 1973ರ ನವೆಂಬರ್ ಅಂದಿನ ಮುಖ್ಯಮಂತ್ರಿ ಗಳಾಗಿದ್ದ ಡಿ. ದೇವರಾಜ್ ಅರಸು ರವರ ಸಮಯದಲ್ಲಿ ಕರ್ನಾಟಕ ಎಂದು ಮರುನಾಮಕರಣ ವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಾ ಅಧ್ಯಕ್ಷ ರಾಜೀವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಬಿ.ಆರ್.ನಟರಾಜ್ ಜೋಯಿಸ್, ಮೈಸೂರು ನಗರ ಪಾಲಿಕೆ ಸದಸ್ಯ ಎಂ ಸಿ ರಮೇಶ್ ಉಪಸ್ಥಿತರಿದ್ದರು.
ಸಮಾಜ ಸೇವಕ ಶಿವೇಗೌಡರು 40 ಮಂದಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ಅನ್ನು ವಿತರಿಸಿದರು. ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಕಾರ್ಯಕ್ರಮದದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.