ಮೈಸೂರು: ಪುಟ್ಟಣ್ಣ ನವರ ಗರಡಿಯಲ್ಲಿ ಬೆಳೆದ ಅನೇಕರು ಕಿಂಗ್ ಆಗಿ ಚಿತ್ರರಂಗದಲ್ಲಿ ಮುನ್ನಡೆದರು. ಆದರೆ ಕಿಂಗ್ ಮೇಕರ್ ಆದ ಪುಟ್ಟಣ್ಣನವರನ್ನು ಇಂದಿಗೆ ಮರೆತಿದ್ದಾರೆ ಎಂದು ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೌಟಿಲ್ಯ ಆರ್. ರಘು ಹೇಳಿದರು.
ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಎಸ್.ಆರ್ ಪುಟ್ಟಣ್ಣ ಕಣಗಾಲ್ ರವರ 87ನೇ ಜನ್ಮದಿನೋತ್ಸವದ ಅಂಗವಾಗಿ ಪುಟ್ಟಣ್ಣ ನೆನಪಿನಂಗಳ ಕಾರ್ಯಕ್ರಮವನ್ನು ಪರಿವರ್ತನಂ ಟ್ರಸ್ಟ್ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ರಘು ಈ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಮೈಕ್ ನಲ್ಲಿ ಪುಟ್ಟಣ್ಣ ಬೆಳೆಸಿದರು ಎನ್ನುತ್ತಾರೆ. ಆದರೆ ಅವರ ಹೆಸರನ್ನು ಉಳಿಸಿ ಬೆಳೆಸಲು ಎಲ್ಲೂ ಮುಂದಾಗದಿರುವುದು ಬೇಸರದ ಸಂಗತಿ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ರವರು ಮಾತನಾಡಿ, ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ ಇಂದಿಗೆ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಸೇರಿದಂತೆ ಹಲವರು ಅತ್ಯುತ್ತಮ ನಟರಾಗಿ ಹೊಮ್ಮಿದರು ಎಂದು ಹೇಳಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈಡಿ ರಾಜಣ್ಣ ರವರು ಮಾತನಾಡಿ, ನಾಯಕರ ಕಾಲ್ಷೀಟ್ ಮತ್ತು ಬ್ಯಾನರ್ ಪ್ರಭಾವದ ಮೇಲೆ ಚಿತ್ರಗಳ ಪ್ರದರ್ಶನ ನಿರ್ಮಾಣ ಕಾಣುತ್ತಿದ್ದ ಸಂಧರ್ಭದಲ್ಲಿ ಒಬ್ಬ ನಿರ್ದೇಶಕನ ಮೇಲೆಯೇ ಅವಲಂಬಿತವಾಗಿ ಚಿತ್ರಗಳು ಶತದಿನಗಳ ಪ್ರದರ್ಶನ ಕಾಣುತ್ತಿತ್ತು ಎಂದರೆ ಪುಟ್ಟಣ್ಣ ಕಣಗಾಲ್ ರವರ ವಿಶೇಷತೆ ಎಂದು ತಿಳಿಸಿದರು.
ನಂತರ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ಮಾತನಾಡಿ, ಕನ್ನಡ ಚಿತ್ರರಂಗವು ಬಹುಭಾಷ ಚಿತ್ರಗಳ ಮುಂದೆ ಅಸ್ಥಿತ್ವಕ್ಕಾಗಿ ಸ್ಪರ್ಧೆಯಲ್ಲಿದ್ದಾಗ ಒಬ್ಬ ಚಿತ್ರನಿರ್ದೇಶಕ ಭಾರತ ಚಿತ್ರರಂಗವೇ ಕನ್ನಡ ಭಾಷೆಯತ್ತ ನೋಡುವಂತೆ ಮಾಡಿದವರು ಪುಟ್ಟಣ್ಣ ಕಣಗಾಲ್ ಎಂದು ತಿಳಿಸಿದರು.
ಪಿರಿಯಾಪಟ್ಟಣ್ಣದ ಕಣಗಾಲ್ ನಲ್ಲಿರುವ ಅವರ ಮನೆಯನ್ನ ಸ್ಮಾರಕವಾಗಿ ಕಾಪಾಡುವುದರ ಬಗ್ಗೆಯಾಗಲಿ ಅಥವಾ ಅವರ ಕುಟುಂಬದವರು ನಡೆಸುತ್ತಿರುವ ಕಣಗಾಲ್ ನೃತ್ಯಾಲಯಕ್ಕೆ ಸಹಕಾರ ನೀಡುವುದರ ಬಗ್ಗೆ ಸರಕಾರ ಮುಂದಾಗದಿರುವುದು ವಿಪರ್ಯಾಸ ಎಂದರು.
ನಂತರ ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್ ರವರು ಅವರು, ಮೈಸೂರು ನಗರದಲ್ಲಿ ನಿರ್ಮಾಣವಾಗುವ ಯಾವುದಾದರೂ ನೂತನ ಬಡಾವಣೆಗೆ ಪುಟ್ಟಣ್ಣ ಕಣಗಾಲ್ ರವರ ಹೆಸರನ್ನು ಇಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಲಿ ಎಂದು ಹೆಚ್.ವಿ ರಾಜೀವ್ ರವರಲ್ಲಿ ಮನವಿ ಮಾಡಿದರು.
ಪುಟ್ಟಣ್ಣ ನೆನಪಿನಂಗಳ ಕಾರ್ಯಕ್ರಮದಲ್ಲಿ ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಯುವ ಮುಖಂಡ ಅಜಯ್ ಶಾಸ್ತ್ರಿ, ಉದ್ಯಮಿ ಅಪೂರ್ವ ಸುರೇಶ್, ಕಡಕೊಳ ಜಗದೀಶ್,
ಗಿರೀಶ್, ರಾಕೇಶ್ ಕುಂಚಿಟಿಗ, ಎಸ್ ಎನ್ ರಾಜೇಶ್, ರಂಗನಾಥ್, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು, ಸುಚೇಂದ್ರ, ಗೋಪಾಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.