ಮೈಸೂರು, ಡಿ. 3- ದಾಸ ಸಾಹಿತ್ಯದಲ್ಲಿ ಕನಕದಾಸರ ಕೊಡುಗೆ ಅಪಾರ ಎಂದು ಜಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದ್ದು, ಕನ್ನಡದ ಪ್ರಸಿದ್ಧ ಕೀರ್ತನಕಾರರು. ಇವರು ಶ್ರೀ ವ್ಯಾಸರಾಯರ ಶಿಷ್ಯರಾಗಿದ್ದರು. ಅವರಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತ ಕನಕದಾಸರು, ಉಡುಪಿ ಶ್ರೀ ಕೃಷ್ಣನ ಮೇಲೆ ಅಪಾರ ಭಕ್ತಿ ಹೊಂದಿದ್ದರು.
ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ತಾರತಮ್ಯಗಳ ವಿರುದ್ಧ ಕೀರ್ತನೆಗಳ ಅಸ್ತ್ರ ಪ್ರಯೋಗಿಸಿದರು.
ಕುಲ-ಕುಲವೆಂದು ಹೊಡೆದಾಡದಿರಿ ಎಂಬ ತತ್ವ ಸಂದೇಶವನ್ನು ಬಿತ್ತಿದ ಅವರು, ನಾಡಿನ ಅದಮ್ಯ ಮಹಾನ್ ಸಂತರು. ಕನಕದಾಸರನ್ನು ಸಂತ, ತತ್ವಜ್ಞಾನಿ, ಕವಿ, ಸಂಗೀತಗಾರರು ಹೀಗೆ ಎಲ್ಲ ತರಹದಲ್ಲೂ ಗುರುತಿಸಬಹುದು ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ ಎಂದು ಎಸ್ ಟಿಎಸ್ ಅವರು ಬಣ್ಣಿಸಿದ್ದಾರೆ.
ಕನಕದಾಸರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳೋಣ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆಂಬ ನಿಟ್ಟಿನಲ್ಲಿ ಪ್ರತಿಜ್ಞೆಗೈಯ್ಯೋಣ. ಈ ಮೂಲಕ ಅರ್ಥಪೂರ್ಣವಾಗಿ ಭಕ್ತ ಕನಕ ದಾಸರ ಜಯಂತಿಯನ್ನು ಆಚರಿಸೋಣ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಸಚಿವ ಎಸ್.ಟಿ.ಸೋಮಶೇಖರ್ ಅವರು ಜನತೆಗೆ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ.