ಅಪರಾಧ ತಡೆ ಮಾಸಾಚರಣೆ: ರೌಡಿಗಳಿಗೆ ಖಡಕ್ ಎಚ್ಚರಿಕೆ

ಮೈಸೂರು, ಡಿ. 3- ನಗರ ಪೊಲೀಸ್ ಘಟಕದ ವತಿಯಿಂದ ಡಿಸೆಂಬರ್ ಮಾಹೆಯಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ.
ಈ ಸಮಯದಲ್ಲಿ ಕಾನೂನು ಬಾಹಿರ ಕೃತ್ಯಗಳು ಮತ್ತು ಅಪರಾಧಗಳನ್ನು ನಿಯಂತ್ರಿಸುವ ಸಂಬಂಧ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕೃಷ್ಣರಾಜ ವಿಭಾಗದ ಎ.ಸಿ.ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ. ಶಿವಶಂಕರ್‍ರವರ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಆವರಣದಲ್ಲಿ ಕೃಷ್ಣರಾಜ ವಿಭಾಗದ ರೌಡಿಗಳ ಪೆರೇಡನ್ನು ಹಾಗೂ ಮೈಸೂರು ನಗರ ಕೇಂದ್ರ ಕಾರಾಗೃಹದ ಮೈದಾನದಲ್ಲಿ ನರಸಿಂಹರಾಜ ವಿಭಾಗದ ರೌಡಿಗಳ ಪೆರೇಡನ್ನು ನಡೆಸಲಾಯಿತು.
ರೌಡಿಗಳು ಯಾವುದೇ ರೀತಿಯ ಅಕ್ರಮ ರಿಯಲ್ ಎಸ್ಟೇಟ್ ದಂಧೆಯಲ್ಲಿ ಭಾಗವಹಿಸುವುದು, ಸಾರ್ವಜನಿಕರಿಗೆ ಕಿರುಕುಳ ನೀಡುವುದು ಸೇರಿದಂತೆ ಇನ್ನಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದೆಂದು ರೌಡಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಲಾಯಿತು.
ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲ್ಲಿ ರೌಡಿಗಳ ಪೆರೇಡ್ ನಡೆಸಿ, ರೌಡಿಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದೇ ಉತ್ತಮ ಜೀವನ ನಡೆಸಲು ಸೂಕ್ತ ತಿಳುವಳಿಕೆ ನೀಡಲಾಗುವುದು ಎಂದು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ತಿಳಿಸಿದ್ದಾರೆ.