ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮರಾಠ ಅಭಿವೃದ್ಧಿ ಪ್ರಾಧಿಕಾರ ನಿಗಮ ರಚನೆ ವಿರೋಧಿಸಿ ಶನಿವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಬೆಂಬಲಿಸಿ ಚಾಮರಾಜನಗರದಲ್ಲೂ ಕೂಡ ಪ್ರತಿಭಟನೆ ನಡೆಸಲಾಯಿತು.
ನಗರದ ಹೃದಯಭಾಗ ಪಚ್ಚಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ, ಸರ್ಕಾರದ ವಿರುದ್ದ ಧಿಕ್ಕಾರ ಘೋಷಣೆ ಕೂಗಿ ಉರುಳು ಸೇವೆ ಮಾಡಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರ್ಕಾರ, ಸಿಎಂ ಯಡಿಯೂರಪ್ಪ ಹಾಗೂ ರೇಣುಕಾಚಾರ್ಯ, ಬಸವರಾಜ್ ಯತ್ನಾಳ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಯಾವ ಉದ್ದೇಶಕ್ಕಾಗಿ ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿದೆ. ರಾಜ್ಯ ಸರ್ಕಾರ ಮತ ಬ್ಯಾಂಕ್ ಗಾಗಿ ಇಂದು ಮರಾಠ ಪ್ರಾಧಿಕಾರ ರಚಿಸಿದೆ. ನಾಳೆ ತಮಿಳು, ತೆಲುಗು ಪ್ರಾಧಿಕಾರ ಹಾಗೂ ಇತರೇ ಭಾಷಿಗರ ಪ್ರಾಧಿಕಾರಗಳನ್ನು ರಚಿಸಿ ಸಮಗ್ರ ಕರ್ನಾಟಕ ರಾಜ್ಯವನ್ನು ಒಡೆಯುವ ಕೆಲಸ ಮಾಡಲಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೇವಲ ಮತಕ್ಕಾಗಿ ರಾಜ್ಯವನ್ನು ಇತರೆ ಭಾಷಿಗರಿಗೆ ಒತ್ತೆ ಇಡಲು ಕನ್ನಡಿಗರಾದ ನಾವು ಬಿಡುವುದಿಲ್ಲ. ರಾಜ್ಯದಲ್ಲಿ ಕೇವಲ 10 ಲಕ್ಷ ಸಂಖ್ಯೆಯಲ್ಲಿರುವ ಮರಾಠರಿಗಾಗಿ ರಾಜ್ಯ ಸರ್ಕಾರ ಪ್ರಾಧಿಕಾರವನ್ನು ರಚನೆ ಮಾಡಿ ಅವರನ್ನು ಓಲೈಸುವ ಕೆಲಸ ಮಾಡುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ 70 ಲಕ್ಷ ಸಂಖ್ಯೆಯಲ್ಲಿರುವ ಕನ್ನಡಿಗರಿಗಾಗಿ ಅಲ್ಲಿನ ಸರ್ಕಾರ ಯಾವುದೇ ಅಭಿವೃದ್ದಿ ಪ್ರಾಧಿಕಾರವನ್ನು ರಚನೆ ಮಾಡಿಲ್ಲ. ಇದೊಂದು ಹುಚ್ಚು ಸರ್ಕಾರ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಬಸವರಾಜ್ ಯತ್ನಾಳ್ ಕನ್ನಡ ಪರ ಸಂಘಟನೆಗಳನ್ನು ರೋಲ್ ಕಾಲ್ ಸಂಘಟನೆಗಳು ಎಂದು ಹೇಳಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಕನ್ನಡ ಸಂಘಟನೆಗಳಿಂದಲೇ ರಾಜ್ಯದಲ್ಲಿ ಇಂದಿಗೂ ಕನ್ನಡ ಉಳಿದು ಕೊಂಡಿದೆ ಎನ್ನುವುದನ್ನು ಯತ್ನಾಳ್ ಮೊದಲು ತಿಳಿದುಕೊಳ್ಳಲಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದ್ದರಿಂದ ಪ್ರತಿಭಟನಕಾರರನ್ನು ಬಂಧಿಸಿದರು.
ಪ್ರತಿಭಟನೆ ಬಿಸಿ ಇದ್ದರೂ ಎಂದಿನಂತೆ ಜನ ಸಂಚಾರ, ವಾಹನ ಸಂಚಾರ ಚಾಮರಾಜನಗರ ಜಿಲ್ಲೆಯಾದ್ಯಂತ ಕಂಡು ಬಂದಿತು.