ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಿ. ನರಸೀಪುರ ತಲಕಾಡಿನಲ್ಲಿ ನಡೆಯಲಿರುವ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಪ್ರವೇಶ ನೀಡುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್, ಸದಸ್ಯ ಕಾರ್ಯದರ್ಶಿ ಡಾ. ಮಹಮ್ಮದ್ ಷರೀಫ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳು ವೈದ್ಯರು ಹಾಗೂ ಮೈಸೂರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ.
ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಪಂಚಲಿಂಗದರ್ಶನದ ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸಿ ವರ್ಚುವಲ್ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ದರ್ಶನವನ್ನು ಸ್ಥಳೀಯರು ಹಾಗೂ ತಾಲೂಕಿನ ಜನತೆಗೆ ಸೀಮಿತಗೊಳಿಸಬೇಕು. ನಿತ್ಯ 1 ಸಾವಿರ ಮಂದಿ ಹಾಗೂ ವಿಶೇಷ ದಿನವಾದ ಡಿ. 14ರಂದು 1,500 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಬೇಕು. ಹೊರಗಡೆಯಿಂದ ಬರುವವರಿಗೆ ಅವಕಾಶ ನೀಡಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.
ಪಂಚಲಿಂಗ ದರ್ಶನದ ವೇಳೆ ಕೋವಿಡ್-19 ಹರಡದಂತೆ ತಡೆಯಲು ಮುನ್ನೆಚ್ಚರಿಕೆವಹಿಸಬೇಕು. ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಮಾಸ್ಕ್ ಧರಿಸಬೇಕು. ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ಆರು ಅಡಿ ಅಂತರದಲ್ಲಿ ಗುರುತು ಮಾಡಬೇಕು. ಆ್ಯಂಬುಲೆನ್ಸ್ ಸಿದ್ಧವಾಗಿಟ್ಟುಕೊಂಡಿರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಪಂಚಲಿಂಗ ದರ್ಶನ ಕಾರ್ಯಕ್ರಮಗಳು: ಡಿ. 10 ಅಂಕುರಾರ್ಪಣ ಪಂಚಲಿಂಗದರ್ಶನ ಪ್ರಯುಕ್ತ ನವಕಲಶ ಸ್ಥಾಪನೆ, ಡಿ. 11 ಧ್ವಜಾರೋಹಣ, ರಕ್ಷಾಬಂಧನ, ಡಿ. 12ರಂದು ಪುಷ್ಪಮಂಟಪಾರೋಹಣ, ಡಿ. 13 ವೃಷಭಾರೋಹಣ, ಡಿ. 14 ಬೆಳಗಿನ ಜಾವ 4.30ಕ್ಕೆ ಮಹಾಭಿಷೇಕ, ಬೆಳಿಗ್ಗೆ 7. 30ರಿಂದ ಶ್ರೀಮದ್ದಿವ್ಯ ಪಂಚಲಿಂಗದರ್ಶನ, ಗಜಾರೋಹಣ ಉತ್ಸವ, ಡಿ. 15 ಶ್ರೀಮದ್ದಿವ್ಯ ಬ್ರಹ್ಮರಥೋತ್ಸವ, ಹಂಸವಾಹನೋತ್ಸವ, ಡಿ. 16 ಶಯನೋತ್ಸವ, ಅಶ್ವಾರೋಹಣ, ಮೃಗಯಾತ್ರೋತ್ಸವ, ಡಿ. 17ರಂದು ಅವಭೃತ ಸ್ನಾನ, ತೆಪೆÇ್ಪೀತ್ಸವ, ಡಿ. 18ರಂದು ಮಹಾಭಿಷೇಕ, ಪಂಚೋಪಚಾರ, ಪೂರ್ವಕ ಕಲ್ಯಾಸ ವಾಹನೋತ್ಸವ, ಡಿ. 19ರಂದು ನಂದಿವಾಹನೋತ್ಸವ ಗಳು ನಡೆಯಲಿವೆ.