ಮೈಸೂರು: ಮನುಷ್ಯ ಹಂಚಿ ತಿನ್ನುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದ ಮಹಾರಾಜ್ ಹೇಳಿದರು.
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಮಂಗಳವಾರ ಬಡ ಜನತೆಗಾಗಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದ ಮಹಾರಾಜ್ ಉದ್ಘಾಟಿಸಿ ಮಾತನಾಡಿದರು.
ಪ್ರಾಣಿ-ಪಕ್ಷಿಗಳಲ್ಲಿಯೂ ಒಗ್ಗಟ್ಟು ಇರುತ್ತದೆ. ಅವು ಸಿಕ್ಕ ಆಹಾರವನ್ನು ಎಲ್ಲವೂ ಒಗ್ಗೂಡಿ ಹಂಚಿಕೊಂಡು ತಿನ್ನುತ್ತವೆ. ಆಹಾರ ಕಂಡೊಡನೆ ಕಾಗೆ ತನ್ನ ಬಳಗವನ್ನು ಕೂಗಿ ಕರೆದು ಹಂಚಿಕೊಳ್ಳುತ್ತವೆ ಎಂದು ಹೇಳಿದರು.
ಸಕಲ ಜ್ಞಾನವುಳ್ಳ ಮನುಷ್ಯನು ಈ ರೀತಿ ಹಂಚಿ ತಿನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತಾವು ಗಳಿಸಿದ ಸ್ವಲ್ಪ ಪ್ರಮಾಣವನ್ನು ಬಡವರಿಗಾಗಿ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆಂದರು.
ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಬಡವರಿಗಾಗಿ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಸ್ವಾಮಿಗಳು ಹೇಳಿದರು.
ಮೈಸೂರು ನಗರದ ರೋಟರಿ ಉತ್ತರ, ರೋಟರಿ ಜಯಪ್ರಕಾಶ್ ನಗರ, ರೋಟರಿ ಶ್ರೀಗಂಧ, ಪ್ರಗತಿ ಕೋ-ಆಪರೇಟಿವ್ ಸೊಸೈಟಿ ಹಾಗೂ ಚಾಮುಂಡಿಪುರಂನ ಸನಿಹ ಆಪ್ಟಿಕಲ್ಸ್ ಇವರುಗಳ ಸಹಯೋಗದೊಂದಿಗೆ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ರೋಟರಿ ಉತ್ತರದ ಅಧ್ಯಕ್ಷ ಎಂ.ಜೆ. ಸ್ವಾಮಿ, ಕಾರ್ಯದರ್ಶಿ ಯಶವಂತ್ ಕುಮಾರ್, ಜಯಪ್ರಕಾಶ್ ನಗರದ ಅಧ್ಯಕ್ಷ ಚಂದ್ರಶೇಖರ್, ರೋಟರಿ ಶ್ರೀಗಂಧ ಅಧ್ಯಕ್ಷ ಸತೀಶ್, ಪ್ರಗತಿ ಕೋ-ಆಪರೇಟಿವ್ ಸೊಸೈಟಿಯ ಮಂಜುನಾಥ್, ಸೈನಿಕ ದಳದ ರವಿ ಆರ್ಮಿ ಮತ್ತು ಪ್ರಮಥ ಬಳಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.