ಮೈಸೂರು: ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆಗಾಗಿ ಐದು ಮಿಲಿಲೀಟರ್ ನ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿಗೆ ಬೇಡಿಕೆ ಸಲ್ಲಿಸಿದೆ ಎಂದು ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ (ಮೈಲ್ಯಾಕ್ ) ಅಧ್ಯಕ್ಷ ಎನ್ .ವಿ.ಫಣೀಶ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಾಯಿಯ ಜೊತೆಗೆ ಆಯೋಗವು 6,580 ಪ್ಯಾಕೇಟ್ ಸೀಲಿಂಗ್ ವ್ಯಾಕ್ಸ್ ಗೂ ಬೇಡಿಕೆ ಸಲ್ಲಿಸಿದೆ ಎಂದು ತಿಳಿಸಿದರು.
ಇವೆರಡರ ಮೊತ್ತ 1.15ಕೋಟಿ ರೂ. ಆಗಲಿದೆ ಎಂದು ಅವರು ಹೇಳಿದರು.
2020-21ನೇ ಸಾಲಿಗೆ 20ಕೋಟಿ ರೂ. ವಹಿವಾಟಿನ ಗುರಿ ಹೊಂದಿದ್ದು ನವೆಂಬರ್ ಅಂತ್ಯಕ್ಕೆ 12.25ಕೋಟಿ ವಹಿವಾಟು ನಡೆಸಲಾಗಿದೆ ಎಂದರು.
2019-20 ನೇ ಸಾಲಿನಲ್ಲಿ ಕಂಪನಿ ಒಟ್ಟು 21.52ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ 4.59ಕೋಟಿ ಪೇಯಿಂಟ್ಸ್ ವಹಿವಾಟು ಆಗಿದ್ದರೆ, 16.93ಕೋಟಿ ಅಳಿಸಲಾಗದ ಶಾಯಿಯದ್ದು ಎಂದು ಹೇಳಿದರು.
ಹಿಂದಿನ ಆರ್ಥಿಕ ವರ್ಷದಲ್ಲಿ 2.17ಕೋಟಿ ಮೌಲ್ಯದ ಅಳಿಸಲಾಗದ ಶಾಯಿ ರಫ್ತು ವಹಿವಾಟು ಕಂಪನಿ ನಡೆಸಿದೆ ಎಂದವರು ತಿಳಿಸಿದರು.