ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಕಲಬುರಗಿ: ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶ್‍ಕುಮಾರ್ ಘಂಟಾ ನೇತೃತ್ವದ ಕೇಂದ್ರ ನೆರೆಪೀಡಿತ ಪ್ರದೇಶಗಳ ಅಧ್ಯಯನ ತಂಡ ಸೋಮವಾರ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸೆಪ್ಟಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಪ್ರವಾಹಕ್ಕೀಡಾಗಿದ್ದ ಪ್ರದೇಶಗಳ ವೀಕ್ಷಣೆ ನಡೆಸಿತು.
ವಿತ್ತ ಸಚಿವಾಲಯದ ಲೆಕ್ಕ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಒಳಗೊಂಡ ದ್ವಿಸದಸ್ಯ ತಂಡವು ಸೋಮವಾರ ಮೊದಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ಪ್ರವಾಹದಿಂದ ಘಟಕದ ಕಾಂಪೌಂಡ್ ಗೋಡೆ ಬಿದ್ದಿರುವುದನ್ನು ಪರಿಶೀಲಿಸಿತು. ಘಟಕಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆಯಿತು.
153 ರೈತರ ಬೆಳೆ ನಾಶವಾಗಿದ್ದು, ಈ ಪೈಕಿ 53 ರೈತರಿಗೆ ಪರಿಹಾರ ನೀಡಲಾಗಿದ್ದು, ಉಳಿದವರಿಗೂ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಂಡಕ್ಕೆ ಅಧಿಕಾರಿಗಳು ಮಾಹಿತಿ ನೀಡಿದರು.
ನಂತರ ಅಫ್ಜಲಪೂರ ತಾಲ್ಲೂಕಿನ ಬಿದನೂರು ಕೆರೆ ಏರಿ ಒಡೆದು ಹೋಗಿರುವುದನ್ನು ತಂಡ ವೀಕ್ಷಿಸಿತು.
ಈ ಸಂದರ್ಭದಲ್ಲಿ ಶಾಸಕ ಎಂ.ವೈ. ಪಾಟೀಲ್ ಅವರು ಅಧಿಕಾರಿಗಳಿಗೆ ಕೆರೆ ಹಾನಿ ಹಾಗೂ ತಾಲ್ಲೂಕಿನಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಸೇತುವೆ ಮತ್ತು ರಸ್ತೆಗಳು ಹಾನಿಗೀಡಾದ ಚಿಣಮಗೇರಾ, ಮನೆಗಳು ಹಾನಿಗೀಡಾಗಿರುವ ಅಳ್ಳಗಿ-ಬಿ ಗ್ರಾಮ ಹಾಗೂ ಜೇವರ್ಗಿ ತಾಲ್ಲೂಕಿನ ಕೋನ ಹಿಪ್ಪರಗಾ ಬಿಡ್ಜ್ ಕಂ ಬ್ಯಾರೇಜ್ ಕೂಡ ವೀಕ್ಷಿಸಿ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಕೇಂದ್ರದಿಂದ ನೆರೆ ಅಧ್ಯಯನಕ್ಕಾಗಿ 3 ತಂಡಗಳು ಬಂದಿವೆ. ಕಲಬುರಗಿ, ವಿಜಾಪುರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದ್ದು, ತಂಡ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ನಲ್ಲಿ ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ 15410 ಕೋಟಿ ಮೊತ್ತದ ವಿವಿಧ ಹಾನಿಯಾಗಿದೆ. ಆದರೆ, ಎನ್‍ಡಿಆರ್ ಎಫ್ ಮತ್ತು ಎಸ್‍ಡಿಆರ್ ಎಫ್ ಪ್ರಕಾರ 1629 ಕೋಟಿ ರೂಪಾಯಿ ಆಗಲಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಐ.ಎ.ಎಸ್.ಪೆÇ್ರಬೇಷನರ್ ಅಧಿಕಾರಿ ಡಾ.ಆಕಾಶ ಶಂಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಸೂಗೂರು, ಲೋಕೋಪಯೋಗಿ, ನೀರಾವರಿ ಇಲಾಖೆ ಮುಂತಾದ ಇಲಾಖೆ ಅಧಿಕಾರಿಗಳು ಹಾಜರಿದ್ದರು.