ರಸ್ತೆ ಅಗೆಯಲು ಪಾಲಿಕೆ ಅನುಮತಿ ಕಡ್ಡಾಯ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅವರ ಸ್ವಂತ ಕಟ್ಟಡಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳನ್ನು ಪಡೆಯುವುದಕ್ಕಾಗಿ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅಗೆಯುತ್ತಿದ್ದು, ಇದಕ್ಕಾಗಿ ಪಾಲಿಕೆ ವತಿಯಿಂದ ರೋಡ್ ಕಟ್ಟಿಂಗ್ ಶುಲ್ಕ ನಿಗದಿಪಡಿಸಿ ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗೆಯುವುದಕ್ಕಾಗಿ ವಲಯ ಕಚೇರಿಗಳಿಂದ ಅನುಮತಿ ಪಡೆಯಲು ಡಾಂಬರ್ ರಸ್ತೆಗಳಿಗೆ ಪ್ರತಿ ಮೀಟರ್ ಗೆ 1200 ರೂ. ಕಾಂಕ್ರೀಟ್ ರಸ್ತೆಗಳಿಗೆ ಪ್ರತಿ ಮೀಟರ್ ಗೆ 2000 ರೂ. ಹಾಗೂ ಪಾದಚಾರಿ ಮಾರ್ಗಕ್ಕೆ 800 ರೂ. ಗಳನ್ನು ಪಾಲಿಕೆಗೆ ಪಾವತಿಸಿ ಅನುಮತಿ ಪಡೆಯಬೇಕು.
ಅಲ್ಲದೇ ರಸ್ತೆಗಳನ್ನು ಅಗೆದ ನಂತರ ಆ ಭಾಗವನ್ನು ಸರಿಯಾಗಿ ಪುನಶ್ಚೇತನಗೊಳಿಸಬೇಕು ಇಲ್ಲವಾದಲ್ಲಿ ಕಟ್ಟಡ ಮಾಲೀಕರಿಂದ ದುಪ್ಪಟ್ಟು ಶುಲ್ಕವನ್ನು ವಸೂಲು ಮಾಡಲಾಗುತ್ತದೆ. ಅದೇ ರೀತಿ ಅನುಮತಿ ಪಡೆಯದೇ ನಗರ ಪಾಲಿಕೆಯ ರಸ್ತೆಗಳನ್ನು ಅನಧಿಕೃತವಾಗಿ ಅಗೆದರೇ ನಿಗದಿಪಡಿಸಿರುವ ಶುಲ್ಕಕ್ಕೆ ಮೂರು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.