ಮೈಸೂರು: ನಗರದ ಮಂಡಿ ಠಾಣೆ ಪೊಲೀಸರು ಇಬ್ಬರು ಕುಖ್ಯಾತ ಕಳವು ಆರೋಪಿಗಳನ್ನು ಬಂಧಿಸಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಅಜೀಜ್ ಸೇಠ್ ನಗರ ಬೀಡಿ ಕಾಲೋನಿ ಅಬು ಅಕೀಲ್ ಮಸೀದಿ ಹತ್ತಿರದ ವಾಸಿ ಮುಜ್ಜು ಅಹಮ್ಮದ್ (35) ಮತ್ತು ಈತನ ಸಹಚರ ಅಜೀಜ್ ಸೇಠ್ ನಗರ ಬೀಡಿ ಕಾಲೋನಿ ನಿವಾಸಿ ಮುಜಾಮಿಲ್ ಅಹಮ್ಮದ್ (40) ಬಂಧಿತ ಆರೋಪಿಗಳು.
ಬಂಧಿತರಿಂದ ಪೊಲೀಸರು 8 ಲಕ್ಷ ರೂ. ಬೆಲೆ ಬಾಳುವ 225 ಗ್ರಾಂ ತೂಕದ ಚಿನ್ನದ ಆಭರಣಗಳು, ಡೈಮಂಡ್ ಮತ್ತು ಪ್ಲಾಟಿನಂ ಆಭರಣಗಳು ಹಾಗೂ ಗೃಹೋಪಯೋಗಿ ವಸ್ತುಗಳಾದ ಎಲ್.ಸಿ.ಡಿ ಟಿವಿ, ಸೆಟಪ್ ಬಾಕ್ಸ್, ಡಿವಿಡಿ ಪ್ಲೆಯರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ 800 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಇದೇ ಡಿ. 18ರಂದು ರಾತ್ರಿ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಲಷ್ಕರ್ ಮೊಹಲಾ, ಮನೆಯೊಂದರ ಬಾಗಿಲನ್ನು ಮುರಿದ್ದು ಚಿನ್ನ, ಡೈಮಂಡ್, ಪ್ಲಾಟಿನಂ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಕಳ್ಳತನವಾಗಿದ್ದು, ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಮಂಡಿ ಠಾಣಾ ಪೊಲೀಸರು ಪ್ರಕರಣದಲ್ಲಿ ದೊರೆತ ಸುಳಿವುಗಳ ಆಧಾರದ ಮೇರೆಗೆ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಳೆಯ ಕಳುವು ಪ್ರಕರಣದ ಆರೋಪಿ ಸೇರದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಇವರು ಲಷ್ಕರ್ ಮೊಹಲ್ಲಾದ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದರು.
ಮೈಸೂರು ನಗರ ಡಿ.ಸಿ.ಪಿ ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್‍ರವರ ಮಾರ್ಗದರ್ಶನದಲ್ಲಿ ಮಂಡಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ, ಎಸ್.ಐಗಳಾದ ಶಭರೀಶ, ಶಿವಕುಮಾರ್, ಎ.ಎಸ್.ಐ ಕೆ.ಎಸ್.ಗುರುಸ್ವಾಮಿ ಸಿಬ್ಬಂದಿಗಳಾದ ಜಯಪಾಲ, ರಾಜೇಂದ್ರ, ಸಂತೋಷ್ ಕುಮಾರ್, ರವಿಗೌಡ, ಶಂಕರ ಟಿ ಬಂಡಿವಡ್ಡರ್, ಹನುಮಂತ ಕಲ್ಲೇದ, ಕರಿಯಪ್ಪ, ಸಮೀರ್ ರವರುಗಳು ಈ ಆರೋಪಿಗಳಿಬ್ಬರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.