ಮೈಸೂರು, ಡಿ. 29- ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರರಾಜ್ಯ ಮನೆ ಕಳ್ಳನೊಬ್ಬನನ್ನು ನಗರ ಸಿ.ಸಿ.ಬಿ. ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನ ಆಲಪಕ್ಕಂ, ಪೋರೂರ್‍ನ ರಾಜೀವ್‍ಗಾಂಧಿನಗರ್ ವಾಸಿ ಪ್ರೇಂ ಕುಮಾರ್ (29) ಬಂಧಿತ ಅಂತರರಾಜ್ಯ ಮನೆ ಕಳ್ಳ.
ಬಂಧಿತನಿಂದ ಪೊಲೀಸರು ಒಟ್ಟು ರೂ. 9 ಲಕ್ಷ ಬೆಲೆ ಬಾಳುವ 176 ಗ್ರಾಂ ಚಿನ್ನಾಭರಣಗಳು, 454 ಗ್ರಾಂ ಬೆಳ್ಳಿ ಪದಾರ್ಥಗಳು, ನಗದು ಹಣ 25,840 ರೂ, ಯು.ಎಸ್.ಎ. ರಾಷ್ಟ್ರದ 5 ಡಾಲರ್ಸ್ ಹಾಗೂ ಕಳ್ಳತನದ ಹಣದಿಂದ ಖರೀದಿಸಿದ್ದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿರುತ್ತಾರೆ.
ಡಿ. 27ರಂದು ನಗರದ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿರುವ ಭಾಗ್ಯಲಕ್ಷ್ಮಿ ಜ್ಯೂಯಲರಿ ಕ್ರಾಪ್ಟ್ ಅಂಗಡಿ ಮುಂಭಾಗ ಕಳ್ಳತನದ ಮಾಲುಗಳನ್ನು ಬಂಧಿತನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರ ಮಾಡಲಾಗಿ ಈತನು ಚೆನ್ನೈನ ವಿಲ್ಲಿವಕ್ಕಂ ಏರಿಯಾದಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿ ಬಳಿ ಇದ್ದ ಕಳವು ಮಾಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಈತ ಹಿಂದೆ ಚೆನ್ನೈನಲ್ಲಿ 3 ಮನೆಗಳ್ಳತನ ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಎಂಬ ವಿಚಾರವು ಪೊಲೀಸರ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿ ವಿರುದ್ದ ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಗೀತಪ್ರಸನ್ನ, ಸಿ.ಸಿ.ಬಿ. ಘಟಕದ ಎ.ಸಿ.ಪಿ. ವಿ.ಮರಿಯಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‍ಪೆಕ್ಟರ್ ಆರ್. ಜಗದೀಶ್, ಎ.ಎಸ್.ಐ. ಡಿ.ಜಿ.ಚಂದ್ರೇಗೌಡ, ಸಿಬ್ಬಂದಿಗಳಾದ ಸಲೀಂ ಪಾಷ, ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮಿಕಾಂತ, ಎಂ.ಆರ್. ಗಣೇಶ್, ಆನಂದ್, ಅನಿಲ್, ಚಂದ್ರಶೇಖರ್, ಪ್ರಕಾಶ್, ಗೌತಮ್‍ರವರುಗಳು ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.