ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಜಾಗೃತ ದಳ ರಚನೆ ಮಾಡಲಾಗುತ್ತಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತಮ್ಮ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ರಾಜೀವ್ ಅವರು ಮಾತನಾಡಿದರು.
ಜಾಗೃತ ದಳ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು ಓರ್ವ ಡಿವೈಎಸ್ಪಿ, ಇಬ್ಬರು ಸಬ್ ಇನ್ಸ್ ಪೆಕ್ಟರ್, ಇಬ್ಬರು ಮುಖ್ಯ ಪೇದೆ, ಆರು ಪೇದೆಗಳು, ಓರ್ವ ಭೂ ಮಾಪಕ ಸೇರಿದಂತೆ ಹಲವರು ಜಾಗೃತ ದಳದಲ್ಲಿ ಇರುತ್ತಾರೆ ಎಂದು ಅವರು ತಿಳಿಸಿದರು.
ಗೃಹ ಸಚಿವರು ಮೌಖಿಕವಾಗಿ ಈ ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆಂದು ರಾಜೀವ್ ಹೇಳಿದರು.
ಪ್ರಾಧಿಕಾರದ ಸ್ವತ್ತು ಹಾಗೂ ದಾಖಲೆಗೆ ನೈಜತೆ, ನಿಖರತೆ ಬಗ್ಗೆ ದೃಢೀಕರಿಸಲು ಪ್ರತ್ಯೇಕ ವಿಭಾಗ ತೆರೆಯಲಾಗುತ್ತಿದೆ. ಇ ವಿಭಾಗದಲ್ಲಿ ಸಾರ್ವಜನಿಕರು ನಿಗಧಿತ ಶುಲ್ಕ ಪಾವತಿಸಿ ಮುಡಾ ದಾಖಲಾತಿಗಳ ಬಗ್ಗೆ ಖಚಿತ ಮಾಹಿತಿ ಪಡೆಯಬಹುದು ಎಂದರು.
ಮುಡಾ ಆಯುಕ್ತ ಡಾ.ಡಿ.ಬಿ. ನಟರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.