ರಾಮನಗರ: ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ.
ಶೂನ್ಯಕ್ಕೆ ಸೀಮಿತವಾಗಿದ್ದ ಆ ಪಕ್ಷದ ಗ್ರಾಮ ಪಂಚಾಯಿತಿ ಸಂಖ್ಯಾಬಲ ಈಗ ಮೂರಂಕಿ ದಾಟಿದೆ.
ಈವರೆಗೆ ಜಿಲ್ಲೆಯಲ್ಲಿ ಪಾರುಪತ್ಯ ಹೊಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಬುಡವನ್ನು ಬಿಜೆಪಿ ಅಲ್ಲಾಡಿಸಿಬಿಟ್ಟಿದೆ.
ಬೆಂಗಳೂರು ನಗರಕ್ಕೆ ಅತಿ ಸನಿಹದಲ್ಲೇ ಇರುವ ಜಿಲ್ಲೆಯಲ್ಲಿ ಈವರೆಗೂ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ್ದೇ ಅಧಿಪತ್ಯವಾಗಿತ್ತು.
ಎರಡೂ ಪಕ್ಷಗಳಲ್ಲಿ ಬಲಾಢ್ಯ ನಾಯಕರಿದ್ದರೂ ಛಲದಿಂದ ಮುಂದಡಿ ಇಟ್ಟ ಬಿಜೆಪಿ, ಎಲ್ಲರ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದೆ ಹಾಗೂ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ 234ಕ್ಕೂ ಹೆಚ್ಚು ಕಡೆ ಕಮಲ ಅರಳಿದೆ.
ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನೇತೃತ್ವದ ಕಾಂಗ್ರೆಸ್ ಮತ್ತು ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್. ಇವೆರಡೂ ಶಕ್ತಿಗಳನ್ನು ಪಕ್ಕಾ ಕಾರ್ಯತಂತ್ರದ ಮೂಲಕ ಹಿಮ್ಮೆಟ್ಟಿಸಿದವರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ.
ಕರಾರುವಕ್ಕಾದ ಪ್ಲ್ಯಾನ್, ನಿರಂತರವಾಗಿ ಕಾರ್ಯಕರ್ತರ ಸಂಪರ್ಕ, ಎಡೆಬಿಡದ ಸಂಚಾರ, ಮುಖಂಡರೊಂದಿಗೆ ನಾಲ್ಕೂ ತಾಲ್ಲೂಕುಗಳಲ್ಲೂ ಬಿರುಸಿನ ಪ್ರಚಾರ, ಇಷ್ಟರ ಜತೆಗೆ ಸರಳತೆ-ಸಜ್ಜನಿಕೆಯಿಂದ ಹಳ್ಳಿಹಳ್ಳಿಗೂ ತೆರಳಿ, ಹೊಲ- ತೋಟವೆನ್ನದೆ ಓಡಾಟ ನಡೆಸಿದ ಡಿಸಿಎಂ ಪಕ್ಷಕ್ಕೆ ಭರ್ಜರಿ ಫಸಲು ತೆಗೆದುಕೊಟ್ಟಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಒಟ್ಟು 234 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಈ ಸಂಖ್ಯೆಯಲ್ಲಿ ಮತ್ತೂ ಹೆಚ್ಚಳವಾಗುವುದು ನಿಶ್ಚಿತವಾಗಿದೆ. ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆ ಕನಕಪುರದಲ್ಲಿಯೇ ಬಿಜೆಪಿ 52 ಗ್ರಾ.ಪಂ. ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದೆ.
ವಿಶೇಷವೆಂದರೆ ಆ ತಾಲ್ಲೂಕಿನ ಎಲ್ಲ ಪಂಚಾಯಿತಿಗಳ ಅನೇಕ ಗ್ರಾಮಗಳಲ್ಲಿ ಕೇಸರಿ ಬಾವುಟ ಹಾರಿದ್ದು ಜೆಡಿಎಸ್‍ಗಿಂತ (45) ಹೆಚ್ಚು ಸ್ಥಾನಗಳನ್ನು ಗೆದ್ದಿದೆ.
ಬಹುಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಪರಮಾಪ್ತರಾಗಿದ್ದ ಅನೇಕ ಅಭ್ಯರ್ಥಿಗಳಿಗೆ ಕಮಲಪಾಳಯ ಸೋಲಿನ ರುಚಿ ತೋರಿಸಿದೆ. ಈ ಪೈಕಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ಅವರು ತಮ್ಮ ಸ್ವಗ್ರಾಮ ಚಿಕ್ಕೊಂಡಳ್ಳಿಯಲ್ಲಿ ಮತ್ತು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಅವರೂ ತಮ್ಮ ಹುಟ್ಟೂರು ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ಹೀನಾಯವಾಗಿ ಸೋತಿದ್ದಾರೆ.