ಮೈಸೂರು, ಜ. 2- ನಗ-ನಾಣ್ಯ ಕಳೆದುಕೊಂಡವರ ಮನೆ ಮನೆಗೆ ತೆರಳಿ ಚಿನ್ನಾಭರಣ ಹಿಂದಿರುಗಿಸಿ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷಾಚರಣೆಯನ್ನು ಮೈಸೂರು ಪೊಲೀಸರು ಆಚರಿಸಿದ್ದಾರೆ.
ನಗರ ಪೊಲೀಸರು ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರ ಮನೆ ಮನೆಗೆ ತೆರಳಿ ಚಿನ್ನಾಭರಣ ಮತ್ತು ನಗದನ್ನು ಹಿಂತಿರುಗಿಸುವ ಮೂಲಕ 2021ನೇ ಹೊಸ ವರ್ಷಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ.
ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನ ಕಳುವು ಪ್ರಕರಣ ಸಂಬಂಧ ದೂರುದಾರರಾದ ರೇಖಾ ರವರ ಮನೆಗೆ ಪೊಲೀಸರು ತೆರಳಿ ವಶಪಡಿಸಿಕೊಂಡ ರೂ. 2,13,000 ಮೌಲ್ಯದ 40 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 200 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ಹಿಂತಿರುಗಿಸಿರುತ್ತಾರೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಹಮ್ಮದ್ ಉಕೈಲ್ ಶಿರೂರ್ ರವರ ಮನೆಗೆ ತೆರಳಿ ವಶಪಡಿಸಿಕೊಂಡಿರುವ ರೂ. 10 ಲಕ್ಷ ಮೌಲ್ಯದ 225 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಿಂತಿರುಗಿಸಿದ್ದಾರೆ.
ಪೊಲೀಸರು ಇವರ ಮನೆಗೆ ತೆರಳಿದಾಗ ಮೊಹಮ್ಮದ್ ಉಕೈಲ್ ಶಿರೂರ್ ರವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಕಳೆದುಕೊಂಡಿದ್ದ ಮಂಗಳ ಸೂತ್ರವನ್ನು ಹಿಂದಿರುಗಿಸಿದ್ದು, ಇದರಿಂದ ಸಂತೋಷಗೊಂಡು ಪೊಲೀಸರಿಗೆ ಸಿಹಿಯನ್ನು ನೀಡಿ ಹೊಸ ವರ್ಷದ ಶುಭಾಶಯ ಕೋರಿದರು.
ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಪಿ. ಅಭಿಷೇಕ್‍ರವರಿಗೆ ಎ.ಸಿ.ಪಿ. ನರಸಿಂಹರಾಜ ವಿಭಾಗದ ಕಛೇರಿಯಲ್ಲಿ ವಶಪಡಿಸಿಕೊಂಡಿದ್ದ ನಗದು ಹಣ ರೂ. 2,79,000 ಅನ್ನು ಹಿಂದಿರುಗಿಸಲಾಯಿತು.
ಈ ವಿಶೇಷ ಕಾರ್ಯದಲ್ಲಿ ಡಿ.ಸಿ.ಪಿ. ಗೀತಪ್ರಸನ್ನ, ಎ.ಸಿ.ಪಿ. ಎಂ. ಶಿವಶಂಕರ್, ಪೊಲೀಸ್ ಇನ್ಸ್‍ಪೆಕ್ಟರ್ ಗಳಾದ ಅಜûರುದ್ದೀನ್, ನಾರಾಯಣಸ್ವಾಮಿ, ಡಿ.ಎಸ್. ಸುರೇಶ್‍ಕುಮಾರ್‍ರವರು ಪಾಲ್ಗೊಂಡಿದ್ದರು.
ಪೊಲೀಸರು ಒಟ್ಟು ರೂ. 14,92,000 ಮೌಲ್ಯದ 265 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ರೂ. 2,79,000 ನಗದು ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.